

ಕೆ.ಎಂ.ದೊಡ್ಡಿ: ರೈತರಿಗೆ ಹೆಚ್ಚಿನ ಆದಾಯ ತಂದುಕೊಡುವ ತಾಳೆ ಬೆಳೆಯನ್ನು ಹೆಚ್ಚಾಗಿ ಬೆಳೆಯಲು ಮುಂದಾಗಬೇಕು ಎಂದು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಎಂ.ರೇಖಾ ಸಲಹೆ ನೀಡಿದರು.
ತಾಳೆ ಬೆಳೆ ಅಭಿವೃದ್ಧಿ ಯೋಜನೆಯಡಿ ಸಮೀಪದ ಬಿದರಹಳ್ಳಿ ಗ್ರಾಮದಲ್ಲಿ ರೈತ ಬಿ.ಸಿ.ಯೋಗೇಶ್ ಜಮೀನಿನಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಆಯೋಜಿಸಿದ್ದ ಮೆಗಾ ತಾಳೆ ಕೃಷಿ ಪ್ರೋತ್ಸಾಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಭಾರತದಲ್ಲಿ ಖಾದ್ಯ ತೈಲದ ವಾರ್ಷಿಕ ಬೇಡಿಕೆಯನ್ನು ಸ್ಥಳೀಯ ಉತ್ಪಾದನೆಯಿಂದ ಪೂರೈಸಲು ಸಾಧ್ಯವಾಗುತ್ತಿಲ್ಲ. ಸುಮಾರು 1 ಲಕ್ಷ ಕೋಟಿ ರೂ. ಮೌಲ್ಯದ ಖಾದ್ಯ ತೈಲವನ್ನು ಹೊರದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಖಾದ್ಯ ತೈಲದ ಆಮದು ವೆಚ್ಚ ತಗ್ಗಿಸುವ ನಿಟ್ಟಿನಲ್ಲಿ ತೈಲ ಬೆಳೆಗಳ ಉತ್ಪಾದನೆಗೆ ಹೆಚ್ಚು ಆದ್ಯತೆ ನೀಡಲು ಕೇಂದ್ರ ಸರ್ಕಾರ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ ಪ್ರಾರಂಭಿಸಿದೆ ಎಂದು ತಿಳಿಸಿದರು.
ರೈತ ಬಿ.ಸಿ.ಯೋಗೇಶ್ ಮಾತನಾಡಿ, ಎರಡು ತೆಂಗು ಬೆಳೆಗೆ ಒಂದು ತಾಳೆ ಬೆಳೆ ಸಮ. ತಾಳೆ ಬೆಳೆ ಹೆಚ್ಚು ಲಾಭಾಂಶ ನೀಡುತ್ತಿದ್ದು, ರೈತರು ತಾಳೆ ಬೆಳೆಯಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ತೋಟಗಾರಿಕೆ ಇಲಾಖೆ ಅಧಿಕಾರಿ ಅಧಿಕಾರಿ ಶಿವಪ್ರಸಾದ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋವಿಂದೇಗೌಡ, ಮಾಜಿ ಉಪಾಧ್ಯಕ್ಷ ಬಿ.ಎಚ್.ವೆಂಕಟೇಶ್, ಸೊಸೈಟಿ ಅಧ್ಯಕ್ಷ ಬಿ.ಎಚ್.ಶಂಕರೇಗೌಡ ಮಾಜಿ ಅಧ್ಯಕ್ಷ ಬಿ.ಎಚ್.ನಾಗರಾಜು, ಮಾಜಿ ನಿರ್ದೇಶಕ ಬಿ.ಎಸ್. ರವೀಂದ್ರ, ಸರ್ಕಾರಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಬಿ.ಜಿ. ಹನುಮಕುಮಾರ್, ಗ್ರಾಮದ ಮುಖಂಡರಾದ ಬಿ.ಸಿ.ಹನುಮೇಗೌಡ, ರಮೇಶ್ ಹಲವರು ಉಪಸ್ಥಿತರಿದ್ದರು