ರೈತರು ಸಂಪನ್ಮೂಲ ಸಂರಕ್ಷಿಸಿ ‘ಸಮೃದ್ಧಿ ಕಡೆ ಸಾಗಲಿ’

SANMANA
Published on

ಶಿರಸಿ: ರೈತ ಕುಟುಂಬ ಸಂಪನ್ಮೂಲ ಹೆಚ್ಚಿಸಿಕೊಂಡು ಉದ್ಯಮಿಗಳ ಮಟ್ಟದಲ್ಲಿ ಬೆಳೆಯಬೇಕಾದರೆ ನೈಸರ್ಗಿಕ ಸಂಪನ್ಮೂಲಗಳಾದ ಮಣ್ಣು, ನೀರು ಸರಿಯಾಗಿ ಸಂರಕ್ಷಿಸಿ ಕೃಷಿ ಸಮೃದ್ಧಿಯೆಡೆಗೆ ಸಾಗಬೇಕು ಎಂದು ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ಕುಲಪತಿ ಡಾ.ಪಿ.ಎಲ್.ಪಾಟೀಲ ಹೇಳಿದರು.

ತಾಲೂಕಿನ ಅಂಡಗಿ ಕ್ಯಾದಗಿಕೊಪ್ಪದ ಅವಧೂತ ಕಲ್ಲೇಶ್ವರ ಸ್ವಾಮೀಜಿ ಗುರುಮಠದ ಸಭಾಭವನದಲ್ಲಿ ಗುರುವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಶ್ರಯದಲ್ಲಿ ಹಮ್ಮಿಕೊಂಡ ರಾಜ್ಯಮಟ್ಟದ ಮೂರು ದಿನದ ಕೃಷಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ರೈತರ ಶ್ರೇಯೋಭಿವೃದ್ಧಿಗೆ 6 ವಿಶ್ವವಿದ್ಯಾಲಯಗಳಿದ್ದು, ಕೃಷಿ ಶಿಕ್ಷಣ ನೀಡುವುದು ಅದರ ಮೂಲ ಉದ್ದೇಶವಾಗಿದೆ. ಕೃಷಿ ವಿಶ್ವವಿದ್ಯಾಲಯಗಳಲ್ಲಿ ಶೇ.50ರಷ್ಟು ಅವಕಾಶ ಕೃಷಿಕರಿಗೆ, ಅವಲಂಬಿತರಿಗೆ ಮೀಸಲಿದೆ. ಕೃಷಿ ಹೊಂಡಗಳ ಮೂಲಕ ನೀರು ಇಂಗಿಸುವ ಕಾರ್ಯ ಅತಿ ಮುಖ್ಯವಾಗಿದೆ. ಅಂತರ್ಜಲ ಮಟ್ಟ ಏರಿಕೆಯಾದರೆ ಬೆಳೆಗಳಿಗೆ ಅನುಕೂಲವಾಗುತ್ತದೆ. ಪೋಷಕಾಂಶಗಳ ಕೊರತೆ ಪತ್ತೆ ಹಚ್ಚಲು ಬೇಸಿಗೆಯಲ್ಲಿ 2 ವರ್ಷಕ್ಕೊಮ್ಮೆ ಮಣ್ಣು ಪರೀಕ್ಷೆ ಮಾಡಿಸಬೇಕು’ ಎಂದರು.

ಬೆಳೆ ಪದ್ಧತಿಯಲ್ಲಿ ಪರಿವರ್ತನೆ ಅವಶ್ಯವಾಗಿದ್ದು, ಒಂದೇ ತರನಾದ ಬೆಳೆ ಬೆಳೆದರೆ ರೋಗ, ಕೀಟ, ಕ್ರಿಮಿಗಳು ಅಲ್ಲಿಯೇ ಇರುತ್ತವೆ. ಬೆಳೆ ಪರಿವರ್ತನೆ ಮಾಡುವುದರಿಂದ ರೋಗ ಹತೋಟಿ ಸಾಧ್ಯವಾಗುತ್ತದೆ. ಕೃಷಿ ಜತೆ ಕೃಷಿಯೇತರ ಚಟುವಟಿಕೆಗಳಾದ ಕುರಿ, ಕೋಳಿ, ಜೇನು ಸಾಕಾಣಿಕೆ, ಹೈನುಗಾರಿಕೆ, ಮೀನುಗಾರಿಕೆಗೆ ಆದ್ಯತೆ ನೀಡಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಮಾತನಾಡಿ, ಕೃಷಿ ಕಾಯ್ದೆ ರೈತರ ತಲೆ ಮೇಲೆ ಕೂತಿದೆ. ಅದು ಜಾರಿಯಾಗಬಾರದು ಎಂದು ಅನೇಕ ಹೋರಾಟ ಮಾಡಿದ್ದೇವೆ. ಈ ಕಾಯ್ದೆ ರದ್ದು ಮಾಡುವ ಭರವಸೆ ನೀಡಿದ್ದ ಕಾಂಗ್ರೆಸ್ ಅಧಿಕಾರಕ್ಕೆ ಬಂದು 2 ವರ್ಷದ ಸಾಧನಾ ಸಮಾವೇಶ ಮಾಡಿಕೊಂಡರು ಭರವಸೆ ಈಡೇರಿಸಿಲ್ಲ ಎಂದರು.

ರಾಜ್ಯದ ನೂರಾರು ಟಿಎಂಸಿ ನೀರು ಬೇರೆ ರಾಜ್ಯದ ಪಾಲಾಗುತ್ತಿದೆ. ಮೇಕೆದಾಟು, ಮಹದಾಯಿ, ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ನೀರಿನ ಬಗ್ಗೆ ಸ್ಪಷ್ಟ ತೀರ್ಮಾನಕ್ಕೆ ಬರಬೇಕಿದೆ. ರಾಜಕಾರಣಿಗಳು ಅಧಿಕಾರಕ್ಕಾಗಿ ಸುಳ್ಳು ಹೇಳುವುದನ್ನು ನಾವು ಕೇಳಿ ಬೇಸರಗೊಂಡಿದ್ದೇವೆ. ಕರ್ನಾಕಟದ ವಿದ್ಯುತ್ ಸರಬರಾಜಿನಿಂದ ಕೃಷಿ ಪಂಪ್‌ಸೆಟ್‌ದಾರರನ್ನು ಪ್ರತ್ಯೇಕಿಸಲು ರಾಜ್ಯ ಸರ್ಕಾರ ಹೊರಟಿದೆ ಎಂದರು.

ಈ ಸಂದರ್ಭದಲ್ಲಿ 350 ಭತ್ತದ ತಳಿ ಸಂರಕ್ಷಕ ರಾಮಕೃಷ್ಣ ಭಟ್ಟ ದೇವತೆಮನೆ, ಸಾಧಕ ಮಹಿಳೆ ಗೌರಿ ನಾಯ್ಕ, ದಂತ ವೈದ್ಯ ಹಾಗೂ ಪ್ರಗತಿಪರ ಕೃಷಿಕ ಡಾ.ಜ್ಞಾನೇಶ, ಯುವರಾಜ ಗೌಡ್ರು, ಮಂಜುನಾಥ ನಾಯ್ಕ ಅಂಡಗಿ, ರಾಮಚಂದ್ರ ಮೇಲಿನಮನೆ ಸೊರಬ ಅವರನ್ನು ಸನ್ಮಾನಿಸಲಾಯಿತು. ಭಕ್ತರಹಳ್ಳಿ ಬೈರೇಗೌಡ, ರೂಪಾ ಪಾಟೀಲ, ಟಿ.ಜೆ. ಅಬ್ರಾಹಂ, ಕಲ್ಮೇಶ ಲಿಗಾಡಿ, ಉಮೇಶ ಪಾಟೀಲ, ಸತೀಶ ನಾಯ್ಕ, ಡಾ.ಕ್ರೇಶಿ ಬೆಂಗಳೂರು, ಬಾಬು ಹಸನ್, ಅರುಣಕುಮಾರ ಇತರರು ಇದ್ದರು. ರಾಘವೇಂದ್ರ ನಾಯ್ಕ ಕಿರವತ್ತಿ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net