

ಮೈಸೂರು: ದೇಶದಲ್ಲಿ ಶೇ.54 ರಷ್ಟು ಭೂಮಿ ರೈತರ ಬಳಿ ಇರುವ ಹಿನ್ನೆಲೆಯಲ್ಲಿ ಭೂಮಿಯನ್ನು ಉಳಿಸುವ ವಿಚಾರದಲ್ಲಿ ರೈತರು ಮಹತ್ವದ ಪಾತ್ರ ನಿರ್ವಹಿಸಬೇಕು ಎಂದು ಬೆಳವಲ ಫೌಂಡೇಷನ್ ಅಧ್ಯಕ್ಷ ಡಾ. ರಾಮಕೃಷ್ಣ ಹೇಳಿದರು.
ಪರಿಸರ ಬಳಗ, ಸಹಜ ಸಮೃದ್ಧ, ಉಳುಮೆ ಪ್ರತಿಷ್ಠಾನ, ಬೆಳವಲ ಫೌಂಡೇಷನ್, ಎಚ್.ಸಿ. ದಾಸಪ್ಪ ಸಾರ್ವಜನಿಕ ವಿಚಾರ ಸಂಸ್ಥೆ, ಅಂಗಳ ಸಾಹಿತ್ಯ ಬಳಗ ವತಿಯಿಂದ ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಭಾನುವಾರ ನೈಸರ್ಗಿಕ ಕೃಷಿ ಮತ್ತು ಮಣ್ಣು ಸಂರಕ್ಷಣೆ ವಿಷಯದ ಕುರಿತು ಹಮ್ಮಿಕೊಂಡಿದ್ದ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಣ್ಣು, ಕೃಷಿ ಮತ್ತು ಪರಿಸರವನ್ನು ಬೇರ್ಪಡಿಸಲು ಸಾಧ್ಯವಿಲ್ಲ. ನಮ್ಮ ದೇಶದಲ್ಲಿ ಶೇ.70 ರಷ್ಟು ಕೃಷಿ ಭೂಮಿ ಇತ್ತು. ಇದೀಗ ಇದರ ಪ್ರಮಾಣ ಶೇ.54ಕ್ಕೆ ಕುಸಿತ ಕಂಡಿದೆ. ಹಾಗಾಗಿ ಕೃಷಿಯನ್ನು ಕಡೆಗಣಿಸಿ ಪರಿಸರವನ್ನು ಉಳಿಸಲು ಸಾಧ್ಯವಿಲ್ಲ. ಭೂಮಿ ದೇಹವಾದರೆ ಮಣ್ಣು (ಭೂಮಿಯ ಮೇಲ್ಪದರ) ಚರ್ಮ ಇದ್ದಂತೆ. ನಮ್ಮ ದೇಹಕ್ಕೆ ಹಾನಿಕಾರಕವಾದ ಅಂಶಗಳು ಸೇರ್ಪಡೆಯಾದರೆ ಚರ್ಮದಲ್ಲಿ ತುರಿಕೆ ಹಾಗೂ ಇನ್ನಿತರ ಲಕ್ಷಣಗಳು ಕಂಡು ಬರುತ್ತದೆ. ಅದೇ ರೀತಿ ಭೂಮಿಗೆ ವಿಷಕಾರಕ ಅಂಶ ಸೇರಿಸಿದರೆ ಅದು ಮಣ್ಣಿನಲ್ಲಿ ಗೋಚರಿಸುತ್ತದೆ. ವಿವಿಧ ಕಾರಣಗಳಿಂದ ಭೂಮಿ ಕಲುಷಿತಗೊಳ್ಳುತ್ತಿದ್ದು, ಭೂಮಿಯನ್ನು ಉಳಿಸಲು ಎಲ್ಲರು ಒಗ್ಗೂಡಿ ಶ್ರಮಿಸಬೇಕು ಎಂದು ಕರೆ ನೀಡಿದರು.
ದೇಶದ ಒಟ್ಟು ಬೌಗೋಳಿಕ ವಿಸ್ತೀರ್ಣ 329 ಮಿಲಿಯಮ್ ಹೆಕ್ಟೇರ್‌ನಷ್ಟು ಇದ್ದು, ಈ ಪೈಕಿ 179.9 (ಶೇ.54) ಮಿಲಿಯನ್ ಹೆಕ್ಟೇರ್ ಕೃಷಿ ಭೂಮಿ ಇದೆ. ಕೃಷಿಯೇತರ ಭೂಮಿ 149 ಮಿಲಿಯನ್ ಹೆಕ್ಟೇರ್‌ನಷ್ಟು ಇದೆ. ಕೃಷಿ ಭೂಮಿ ಮಾತ್ರವಲ್ಲ ನಗರವಾಸಿಗಳು ಸಹ ದೊಡ್ಡಪ್ರಮಾಣದಲ್ಲಿ ಮಣ್ಣನ್ನು ಕಲುಷಿತಗೊಳಿಸುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ ತ್ಯಾಜ್ಯ ನಿರ್ವಹಣೆ ದೊಡ್ಡ ಸವಾಲಿನ ವಿಚಾರವಾಗಿದೆ ಎಂದು ಹೇಳಿದರು.
ಸಾವಯವ ಕೃಷಿಕ ಡಾ.ಎ.ಪಿ. ಚಂದ್ರಶೇಖರ, ತುಮಕೂರಿನ ಶಿವನಂಜಯ್ಯ ಬಾಳೇಕಾಯಿ, ಪರಿಸರ ಬಳಗ ಸದಸ್ಯ ಪರಶುರಾಮೇಗೌಡ ಹಾಗೂ ಇತರರು ಇದ್ದರು.