ರೈತರು ಹೈನುಗಾರಿಕೆಗೂ ಆದ್ಯತ ನೀಡಲಿ

25 HANUR 1
ಒಡೆಯರಪಾಳ್ಯದಲ್ಲಿ ಆಯೋಜಿಸಿದ್ದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ ಮಾತನಾಡಿದರು. ಶಾಹುಲ್ ಅಹಮದ್, ಉದ್ದನೂರು ಪ್ರಸಾದ್, ಕುಮಾರಸ್ವಾಮಿ, ನಿರ್ಮಲಾ ಇತರರು ಇದ್ದರು.
Published on

ಹನೂರು: ಪ್ರತಿಯೊಬ್ಬರೂ ಕೃಷಿ ಜತೆಗೆ ಹೈನುಗಾರಿಕೆಯನ್ನು ಅಳವಡಿಸಿಕೊಂಡರೆ ಆರ್ಥಿಕವಾಗಿ ಹೆಚ್ಚಿನ ಅಭಿವೃದ್ಧಿ ಹೊಂದಬಹುದು ಎಂದು ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ ಹೇಳಿದರು.

ತಾಲೂಕಿನ ಒಡೆಯರಪಾಳ್ಯ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಮದಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘ ಸ್ಥಾಪನೆಯಾಗಿ 20 ವರ್ಷ ಕಳೆದಿದೆ. ಆದರೆ ಸ್ವಂತ ಕಟ್ಟಡ ಇರಲಿಲ್ಲ. ಇದರಿಂದ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಹಾಗೂ ಸಭೆ, ಕಾರ್ಯಕ್ರಮವನ್ನು ನಡೆಸಲು ತೊಡುಕಾಗಿ ಪರಿಣಮಿಸಿತ್ತು. ಹಾಗಾಗಿ ಕಟ್ಟಡದ ಅವಶ್ಯಕತೆ ಇತ್ತು. ಆದರೆ ಈ ಕಾರ್ಯ ಹಲವು ವರ್ಷದಿಂದಲೂ ನನೆಗುದಿಗೆ ಬಿದ್ದಿತ್ತು. ಇದೀಗ ಕೆಎಂಎಫ್‌ನಿಂದ 4.5 ಲಕ್ಷ ರೂ. ಹಾಗೂ ಚಾಮುಲ್‌ನಿಂದ 3 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಿರುವುದು ಸಂತಸವಾಗಿದೆ. ಇನ್ನು ಸಂಘವು ಅಭಿವೃದ್ಧಿ ಹೊಂದಬೇಕಾದರೆ ಎಲ್ಲರ ಸಹಕಾರ ಅಗತ್ಯ. ಆದ್ದರಿಂದ ಪ್ರತಿಯೊಬ್ಬರೂ ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆದುಕೊಳ್ಳಬೇಕು. ಗುಣಮಟ್ಟದ ಹಾಲನ್ನು ಪೂರೈಸಬೇಕು. ಇದರಿಂದ ಉತ್ತಮ ದರವನ್ನು ಪಡೆಯುವುದರ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು. ಆದ್ದರಿಂದ ಈ ಬಗ್ಗೆ ಪ್ರತಿಯೊಬ್ಬರೂ ಮನದಟ್ಟು ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಚಾಮುಲ್ ನಿರ್ದೇಶಕರಾದ ಶಾಹುಲ್ ಅಹಮದ್, ಉದ್ದನೂರು ಪ್ರಸಾದ್, ಸಂಘದ ಅಧ್ಯಕ್ಷ ಕುಮಾರಸ್ವಾಮಿ, ಉಪಾಧ್ಯಕ್ಷೆ ನಿರ್ಮಲಾ, ಸದಸ್ಯರಾದ ಮಲ್ಲೇಶ್, ಗೋವಿಂದ, ಶಿವಸ್ವಾಮಿ, ಒಕ್ಕೂಟದ ಉಪ ವ್ಯವಸ್ಥಾಪಕ ಶರತ್‌ಕುಮಾರ್, ವಿಸ್ತರಣಾಧಿಕಾರಿ ವೆಂಕಟೇಶ್, ಕಾರ್ಯದರ್ಶಿ ನಾಗೇಂದ್ರಸ್ವಾಮಿ, ಮುಖಂಡ ಸೋಮಶೇಖರ್ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net