

ಬನ್ನೂರು: ಕೃಷಿಯ ವಿಧಾನದಲ್ಲಿ ನೂತನ ತಂತ್ರಜ್ಞಾನಗಳು, ಆವಿಷ್ಕಾರಗಳು ರೂಪುಗೊಳ್ಳುತ್ತಿದ್ದು, ರೈತರು ಹಳೆ ಮಾದರಿ ಕೃಷಿ ವಿಧಾನವನ್ನು ಬಿಟ್ಟು ನೂತನ ವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಬೆಳೆಯನ್ನು ಬೆಳೆಯಬಹುದು. ತನ್ಮೂಲಕ ಉತ್ತಮ ಆದಾಯವನ್ನು ಪಡೆದುಕೊಳ್ಳಬಹುದೆಂದು ಯಾಚೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೈ.ಎನ್. ಶಂಕರೇಗೌಡ ತಿಳಿಸಿದರು.
ಪಟ್ಟಣದ ಯಾಚೇನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಕೃಷಿ ವಿಶ್ವವಿದ್ಯಾಲಯ ಬೆಂಗಳೂರು ವಿಸ್ತರಣಾ ಶಿಕ್ಷಣ ಘಟಕ, ಸಾವಯವ ಕೃಷಿ ಸಂಶೋಧನಾ ಕೇಂದ್ರ ನಾಗೇನಹಳ್ಳಿ ಮೈಸೂರು ವತಿಯಿಂದ ಶನಿವಾರ ಆಯೋಜಿಸಿದ್ದ ಟೊಮ್ಯಾಟೊ ಬೆಳೆಯ ಕ್ಷೇತ್ರೋತ್ಸವ ಹಾಗೂ ಪ್ರಾತ್ಯಕ್ಷಿಕೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೃಷಿಯನ್ನು ನಂಬಿದ ರೈತರ ಪರಿಸ್ಥಿತಿ ಇಂದು ತೀರ ಹದಗೆಡುತ್ತಿದ್ದು, ಅವರ ಮಕ್ಕಳು ಕೃಷಿಯನ್ನು ತೊರೆದು ನಗರ ಪ್ರದೇಶದತ್ತ ಬೇರೆ ಉದ್ಯೋಗದ ಕಡೆಗೆ ಮುಖ ಮಾಡುತ್ತಿದ್ದಾರೆ. ಆದರೆ ಕೆಲವರು ಕೃಷಿಯಲ್ಲಿ ನೂತನ ತಂತ್ರಜ್ಞಾನ, ನೂತನ ಕೃಷಿಯ ವಿಧಾನವನ್ನು ಅಳವಡಿಸಿಕೊಂಡು ಕೃಷಿಯಲ್ಲಿಯೇ ಉತ್ತಮ ಆದಾಯವನ್ನು ಗಳಿಸುತ್ತಿದ್ದಾರೆ. ಯಾರೂ ಕೃಷಿಯಲ್ಲಿ ಉತ್ತಮ ಸಾಧನೆಯನ್ನು ಮಾಡುತ್ತಿದ್ದಾರೋ ಅಂತಹವರನ್ನು ಭೇಟಿ ನೀಡಿ ಅವರು ಅಳವಡಿಸಿಕೊಂಡ ಕೃಷಿ ವಿಧಾನವನ್ನು ರೈತರು ಅಳವಡಿಸಿಕೊಂಡರೆ ಉತ್ತಮ ಬೆಳೆಯನ್ನು ಬೆಳೆಯಲು, ಕೃಷಿಯಲ್ಲಿ ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗುತ್ತದೆ ಎಂದರು.
ಸಮಾಜ ಸೇವಕ ವೈ.ಎಸ್. ರಾಮಸ್ವಾಮಿ ಮಾತನಾಡಿ, ಕೃಷಿಯ ಜತೆಗೆ ರೈತರು ಉಪಕಸುಬುಗಳನ್ನು ರೂಢಿಸಿಕೊಳ್ಳಬೇಕು. ಕೃಷಿಯಲ್ಲಿ ದೀರ್ಘಕಾಲಿಕ ಬೆಳೆಯನ್ನು ಬೆಳೆಯುವುದರ ಜತೆಗೆ ವಾಣಿಜ್ಯ ಬೆಳೆಯನ್ನು ಬೆಳೆಯಲು ಸಿದ್ಧರಾಗಿರಬೇಕು. ಕೃಷಿ ಭೂಮಿಯ ಮಣ್ಣನ್ನು ಪರೀಕ್ಷೆ ಮಾಡಿಸಿ ಅದಕ್ಕೆ ಅನುಗುಣವಾಗಿ ಬೆಳೆಯನ್ನು ಬೆಳೆಯುವ ಪದ್ಧತಿಯನ್ನು ರೂಢಿಸಿಕೊಳ್ಳಬೇಕೆಂದು ರೈತರಿಗೆ ಸಲಹೆಯನ್ನು ನೀಡಿದ ಅವರು, ಅಡಕೆಯ ಜತೆಗೆ ಕಾಳುಮೇಣಸು, ವೀಳ್ಯದೆಲೆ, ಏಲಕ್ಕಿ ಬೆಳೆಯನ್ನು ಬೆಳೆಯುವುದರಿಂದ ರೈತರಿಗೆ ಉತ್ತಮ ಆದಾಯವು ದೊರೆಯಲಿದೆ ಎಂದರು.
ಟೊಮ್ಯಾಟೊ ಬೆಳೆ ರೈತರಿಗೆ ಲಾಟರಿ ಇದ್ದಂತೆ ಒಮ್ಮೆ ಉತ್ತಮ ಆದಾಯ ದೊರೆತರೆ ಮತ್ತೊಮ್ಮೆ ತೀರಾ ನಷ್ಟವನ್ನುಂಟು ಮಾಡುತ್ತದೆ. ರೈತರು ಮಾರುಕಟ್ಟೆಯನ್ನು ಅವಲಂಬಿಸಿ ಟೊಮ್ಯಾಟೊವನ್ನು ಬೆಳೆದರೆ ಉತ್ತಮ ಆದಾಯ ನಿರೀಕ್ಷಣೆ ಮಾಡಬಹುದು. ಟೊಮ್ಯಾಟೊ ಸಸಿಗಳಲ್ಲಿ ನೂತನವಾದ ತಳಿಗಳು ಲಭ್ಯವಿದ್ದು, ಅವುಗಳನ್ನು ಖರೀದಿ ಮಡುವಂತೆಯೂ ಸಲಹೆ ನಿಡಿದರಲ್ಲದೆ ಆಗಿಂದಾಗ್ಗೆ ಕೃಷಿ ಇಲಾಖೆಗಳಿಗೆ ಭೇಟಿ ನೀಡಿ ರೈತರಿಗೆ ದೊರೆಯುವ ಸೌಲಭ್ಯವನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಸಹಾಯಕ ಪ್ರಾಧ್ಯಾಪಕಿ ಡಾ. ಎಂ.ಆರ್. ಮೌಲ್ಯ, ಸಹಾಯಕ ಪ್ರಾಧ್ಯಾಪಕ ಡಾ. ಶಿವಕುಮಾರ್, ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಉಮೇಶ್, ಬನ್ನೂರು ಹೋಬಳಿ ಘಟಕದ ಅಧ್ಯಕ್ಷ ವೈ. ಎ. ಪುಟ್ಟರಾಜು, ಪ್ರಗತಿ ಪರ ರೈತ ಕಾಂತರಾಜು, ಕಾರ್ಯನಿರ್ವಹಣಾಧಿಕಾರಿ ಕ್ಯಾತೇಗೌಡ ಸೇರಿದಂತೆ ಯಾಚೇನಹಳ್ಳಿ ಗ್ರಾಮದ ಗ್ರಾಮಸ್ಥರು, ರೈತ ಮುಖಂಡರು ಇದ್ದರು.