ರೈತರ ಶಾಲೆ ರಾಜ್ಯಕ್ಕೆ ಮಾದರಿಯಾಗಲಿ: ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಉತ್ತರಾಧಿಕಾರಿ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಹಾರೈಕೆ

Farmers School Inauguration Ceremony Mandya
Published on

ಮಂಡ್ಯ: ರೈತರಿಗೆ ಅನುಕೂಲವಾಗಲೆಂದು ಶಾಲೆ ಆರಂಭಿಸಲಾಗುತ್ತಿದೆ. ಇದರ ಉದ್ದೇಶದ ಕನಸು ಈಡೇರಿಸಬೇಕಾದರೆ ಎಲ್ಲರೂ ಜತೆಯಲ್ಲಿಯೇ ಇದ್ದುಕೊಂಡು ಇವರ ಪ್ರಯತ್ನ ಫಲಿಸುವಂತೆ ನೋಡಿಕೊಳ್ಳಬೇಕು. ಇದರಿಂದ ಇಡೀ ರಾಜ್ಯಕ್ಕೆ ಉತ್ತಮ ಹೆಸರು ನೀಡುವ ನಿಟ್ಟಿನಲ್ಲಿ ರೈತರ ಶಾಲೆಯು ಮಾದರಿಯಾಗಿ ನಡೆಯಲಿ ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಉತ್ತರಾಧಿಕಾರಿ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಹಾರೈಸಿದರು.

ತಾಲೂಕಿನ ಆಲಕೆರೆ ಗ್ರಾಮದಲ್ಲಿ ಕೆಂಪೇಗೌಡ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ ರೈತರ ಶಾಲೆ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಕೃಷಿಯಲ್ಲಿ ರೈತರು ಬಹುಬೆಳೆ ಪದ್ಧತಿ ಅಳವಡಿಸಿಕೊಳ್ಳಬೇಕು. ಜತೆಗೆ ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗಬೇಕು. ಕೃಷಿಯಲ್ಲಿ ಯೇಥೇಚ್ಚವಾಗಿ ಖರ್ಚು ಮಾಡುವುದನ್ನು ಮೊದಲು ಬಿಡಬೇಕು. ಬಹುಬೆಳೆ ಪದ್ಧತಿ ಹಾಗೂ ವಿವಿಧ ಬಗೆಯ ಬೆಳೆಗಳನ್ನು ಬೆಳೆಯುವ ಮನೋಭಾವ ಬೆಳೆಸಿಕೊಳ್ಳಬೇಕು. ಮಣ್ಣಿನ ಫಲವತ್ತತೆ ಬಗ್ಗೆ ಕೃಷಿ ಹಾಗೂ ಮಣ್ಣು ಪರೀಕ್ಷಾಧಿಕಾರಿಗಳ ಮೂಲಕ ಯಾವ ಬೆಳೆ ಹಾಕಬೇಕು ಎನ್ನುವುದನ್ನು ತಿಳಿದುಕೊಂಡು ವ್ಯವಸಾಯ ಮಾಡಬೇಕು ಎಂದು ಸಲಹೆ ನೀಡಿದರು.

ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್ ಮಾತನಾಡಿ, 70 ವರ್ಷದ ಹಿಂದೆ ಮಳೆಯಾಗಿದ್ದ ಕ್ಷಣಗಳನ್ನು ಪ್ರಸ್ತುತದಲ್ಲಿ ನೋಡುತ್ತಿದ್ದೇವೆ. ಒಟ್ಟಿನಲ್ಲಿ ಅತ್ಯುತ್ತಮವಾಗಿ ಮಳೆ ಆಗಿದೆ. ಆದರೆ ಇದರಿಂದ ರೈತರಿಗೆ ಅನಾನುಕೂಲವಾಗಿದೆ. ಕಾರಣ ಕಟಾವು ಮಾಡಿದ ಬೆಳೆಯು ಮಳೆಗೆ ಸಿಲುಕಿಕೊಂಡಿತು. ಅದನ್ನ ಒಕ್ಕಣೆ ಮಾಡಿ ಹುಲ್ಲು ಸಿಗಲಿ ಎಂದರೆ ಅದಕ್ಕೂ ಮಳೆ ಅಡ್ಡಿಯಾಗಿ ರಾಶಿಬಣವೆ ಹಾಕಿರುವುದರಲ್ಲಿ ಮೊಳಕೆ ಬರಲು ಆರಂಭಿಸಿದೆ ಎಂದು ಆತಂಕಪಟ್ಟರು.

ಮಂಡ್ಯ ಜಿಲ್ಲೆಯಲ್ಲಿ ಭತ್ತ, ಕಬ್ಬಿನ ಬೆಳೆಯು ಕಳೆದ 15 ವರ್ಷದಲ್ಲಿ ಶೇ.20 ರಷ್ಟು ಇಳುವರಿ ಕಡಿಮೆ ಆಗಿದೆ. ಮುಂಗಾರಿನಲ್ಲಿ ಒಂದು ಎಕರೆ ಭತ್ತ ಬೆಳೆಯುವ ರೈತರಿಗೆ ಬರೋಬ್ಬರಿ 20 ಸಾವಿರ ರೂ ನಷ್ಟವಾದರೆ, ಅದೇ ರೀತಿ ಬೇಸಿಗೆ ಬೆಳೆಯಲ್ಲಿ ಕೇವಲ ಒಂದು ಬೆಳೆಗೆಯೇ 40 ಸಾವಿರ ರೂ ನಷ್ಟವಾಗುತ್ತಿದೆ. ಇದು ಕಬ್ಬಿನ ಬೆಳೆಗೂ ಅನ್ವಯಿಸುತ್ತದೆ. ಭತ್ತದ ಬೆಳೆಯು 25 ಕ್ವಿಂಟಾಲ್ ಇದ್ದದ್ದು, ಈಗ 18 ಕ್ವಿಂಟಾಲ್‌ಗೆ ಇಳಿದಿದೆ. ಹವಾಮಾನ ವೈಪರೀತ್ಯದಿಂದ ಇಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿದ್ದು, ಪರಿಸರದ ಬಗ್ಗೆಯೂ ಕಾಳಜಿ ಹೊಂದಬೇಕು ಎಂದು ಸಲಹೆ ನೀಡಿದರು.

ಮಂಡ್ಯ ಕೃಷಿ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಡಾ.ಕೆ.ಎಂ.ಹರಿಣಿಕುಮಾರ್ ಮಾತನಾಡಿ, ಕೃಷಿಯಲ್ಲಿ ತೊಡಗಿಕೊಂಡಾಗ ಮಾತ್ರ ಅದರ ಯಶಸ್ಸು ಸಿಗುತ್ತದೆ. ಪ್ರಸ್ತುತದಲ್ಲಿ ಬದಲಾವಣೆ ಆಗಬೇಕು. ಯಾವ ರೀತಿ ಎಂದರೆ ರೈತರು ಕೃಷಿಯಲ್ಲಿ ಹಾಗೂ ಮಾರುಕಟ್ಟೆಗೆ ತಕ್ಕಂತೆ ಬದಲಾವಣೆಗೆ ಅನುಗುಣವಾಗಿ ಬೆಳೆಗಳನ್ನು ಮತ್ತು ಬೆಳೆಯುವ ಪದ್ಧತಿಯನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮನ್‌ಮುಲ್ ಅಧ್ಯಕ್ಷ ಯು.ಸಿ.ಶಿವಕುಮಾರ್, ನಿರ್ದೇಶಕರಾದ ಬಿ.ಆರ್.ರಾಮಚಂದ್ರು, ಎಂ.ಎಸ್.ರಘುನಂದನ್, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್, ಕೆಂಪೇಗೌಡ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಎಂ.ಎನ್.ಚಂದ್ರಶೇಖರ್, ಅಧ್ಯಕ್ಷ ಎನ್.ಎಸ್.ನವೀನ್‌ಕುಮಾರ್, ಕಾರ್ಯದರ್ಶಿ ಸತ್ಯಮೂರ್ತಿ, ಆಲಕೆರೆ ಘಟಕದ ಅಧ್ಯಕ್ಷ ಎ.ಎನ್.ಚಂದ್ರು, ಖಜಾಂಚಿ ಪ್ರದೀಪ್‌ಕುಮಾರ್, ಗ್ರಾಪಂ ಸದಸ್ಯ ಅಭಿನಂದನ್, ಧರ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net