ಸಾಲಮನ್ನಾಕ್ಕೆ ಒತ್ತಾಯಿಸಿ ರೈತರ ಸಂಕಲ್ಪಯಾತ್ರೆ

BLY- 29-4
ಬಳ್ಳಾರಿ ನಗರದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮುಂಭಾಗದಲ್ಲಿ ಸೋಮವಾರ ರೈತರ ಸಂಕಲ್ಪಯಾತ್ರೆಯಲ್ಲಿ ಹೋರಾಟಗಾರ ಮಲ್ಲಿಕಾರ್ಜುನ ರೆಡ್ಡಿ ಮಾತನಾಡಿದರು. ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಆರ್.ಮಾಧವರೆಡ್ಡಿ, ಮುಖಂಡರಾದ ಬಸವರಾಜ್, ಪಂಪನಗೌಡ, ಕಿರಣ್‌ಕುಮಾರ್, ಸುರೇಂದ್ರ ಇನ್ನಿತರರಿದ್ದರು.
Published on

ಬಳ್ಳಾರಿ: ರೈತರ ಸಾಲಮನ್ನಾಕ್ಕೆ ಒತ್ತಾಯಿಸಿ ರಾಜ್ಯಾದ್ಯಂತ ಸಂಕಲ್ಪಯಾತ್ರೆ ಕೈಗೊಳ್ಳಲಾಗುತ್ತಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಆರ್.ಮಾಧವರೆಡ್ಡಿ ಹೇಳಿದರು.

ನಗರದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮುಂಭಾಗದಲ್ಲಿ ಸೋಮವಾರ ರೈತರ ಸಂಕಲ್ಪಯಾತ್ರೆ ಕಾರ್ಯಕ್ರಮದ ವೇಳೆ ಮಾತನಾಡಿದ ಅವರು, ರಾಜ್ಯದ 22 ಜಿಲ್ಲೆಗಳಲ್ಲಿ 54 ಲಕ್ಷ ರೈತರು 26 ಸಾವಿರ ಕೋಟಿ ರೂ. ಬೆಳೆ ಸಾಲವನ್ನು ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಪಡೆದಿದ್ದಾರೆ. ಆ ಸಾಲವನ್ನು ಮನ್ನಾ ಮಾಡಿ ಹೊಸ ಸಾಲ ನೀಡಬೇಕು ಎಂದು ಒತ್ತಾಯಿಸಿದರು.

ಬ್ಯಾಂಕ್‌ನಲ್ಲಿ ಸಾಲ ಮಾಡಿದ ರೈತರಿಗೆ ಸಾಲ ಮರುಪಾವತಿಸುವಂತೆ ಬ್ಯಾಂಕ್‌ನಿಂದ ನೋಟಿಸ್ ಜಾರಿ ಮಾಡಲಾಗುತ್ತಿದೆ. ಇದು ರೈತರ ಆತ್ಮಹತ್ಯೆಗೆ ಕಾರಣವಾಗುತ್ತಿದೆ. ಕೂಡಲೇ ಕೇಂದ್ರ ಸರ್ಕಾರ ಸಾಲ ವಸೂಲಾತಿಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಪಡೆದ ಸಾಲದ ಅಸಲಿನ ಮೇಲೆ ಶೇ.10 ರಷ್ಟು ವಸೂಲಿ ಮಾಡಿ ರೈತರನ್ನು ಋಣಮುಕ್ತರನ್ನಾಗಿ ಮಾಡಿವೆ. ಬ್ಯಾಂಕ್‌ನ ಅಧಿಕಾರಿಗಳು ಮತ್ತು ಆಳುವ ಸರ್ಕಾರಗಳು ರೈತರ ಪರ ಇದ್ದೇವೆ ಎಂದು ಹೇಳುತ್ತಾರೆ. ಆದರೆ ರೈತರ ಸಮಸ್ಯೆಯನ್ನು ಕೇಳುವುದೇ ಇಲ್ಲ. ಸರ್ಕಾರದ ಅವೈಜ್ಞಾನಿಕ ಸಾಲ ವಸೂಲಾತಿ ನೀತಿಯಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಜ.30ರಿಂದ ಮಾ.27ರ ವರೆಗೆ 22 ಜಿಲ್ಲೆಗಳಲ್ಲಿ ರೈತ ಸಂಕಲ್ಪ ಯಾತ್ರೆ ಕೈಗೊಳ್ಳಲಾಗಿದ್ದು, ರೈತರಲ್ಲಿ ಜಾಗೃತಿ ಮೂಡಿಸಲಾಗುವುದು. ನಂತರ ಬಳ್ಳಾರಿಯಲ್ಲಿ ಮಾ.28ರಂದು ಬಹಿರಂಗ ಸಭೆ ನಡೆಸಲಾಗುವುದು ಎಂದರು.

ಮುಖಂಡರಾದ ಮಲ್ಲಿಕಾರ್ಜುನ ರೆಡ್ಡಿ, ಬಸವರಾಜ್, ಪಂಪನಗೌಡ, ಕಿರಣ್‌ಕುಮಾರ್, ಸುರೇಂದ್ರ, ಬಸವರಾಜಸ್ವಾಮಿ, ಕೆ.ಬಸವರೆಡ್ಡಿ, ತಿಮ್ಮನಗೌಡ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net