ರೈತರ ಬಾಳು ಬೆಳಗಿದ ಬಾಳೆ, ಶ್ರಾವಣಕ್ಕೂ ಮುನ್ನವೇ ಉತ್ತಮ ಬೆಲೆ

BANANA STIRY
Published on

ಮಂಜುನಾಥ ಸಾಯೀಮನೆ ಶಿರಸಿ

ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ದರ ಹೆಚ್ಚಿಸಿಕೊಳ್ಳುತ್ತಿದ್ದ ಬಾಳೆಗೆ ಈ ವರ್ಷ ಮುಂಚಿತವಾಗಿಯೇ ದರ ಬಂದಿದೆ. ಬಾಳೆ ಬೆಳೆದ ರೈತರ ಮುಖದಲ್ಲಿ ಈಗ ಮಂದಹಾಸ ಮೂಡಿದೆ.

ಮಾವಿನ ಹಣ್ಣಿನ ಸೀಜನ್ ಮುಕ್ತಾಯವಾಗುತ್ತಿದ್ದಂತೆಯೇ ಬಾಳೆಗೊನೆಗೆ ಬೇಡಿಕೆ ಬರಲಾರಂಭಿಸುತ್ತವೆ. ಶ್ರಾವಣ ಮಾಸದಲ್ಲಿ ಬಾಳೆಗೊನೆಗಳಿಗೆ ಬಲು ಬೇಡಿಕೆ. ಆ ಬಳಿಕ ಗಣೇಶ ಚತುರ್ಥಿ, ದೀಪಾವಳಿಯವರೆಗೂ ಬಾಳೆಗೊನೆಗಳಿಗೆ ಎಲ್ಲಿಲ್ಲದ ಹಿಗ್ಗು. ದೀಪಾವಳಿಯ ನಂತರ ದರ ಇಳಿಯಲಾರಂಭಿಸಿ ಬೇಸಿಗೆಯ ದಿನಗಳಲ್ಲಿ ಬಾಳೆಗೊನೆಯನ್ನು ಕೇಳುವವರೇ ಇಲ್ಲದ ಸ್ಥಿತಿ ನಿರ್ವಣವಾಗುತ್ತದೆ. ಹೀಗಾಗಿ, ಶ್ರಾವಣ ಮಾಸ ಬಂದಾಗಲಷ್ಟೇ ಬಾಳೆ ಬೆಳೆಗಾರರು ಉತ್ಸುಕರಾಗುತ್ತಾರೆ. ಆದರೆ, ಈ ವರ್ಷ ಮುಂಚಿತವಾಗಿಯೇ ದರ ಬಂದಿರುವುದು ರೈತರಿಗೆ ಆಶಾದಾಯಕವಾಗಿದೆ. ಹಬ್ಬದ ದಿನಗಳಲ್ಲಿ ಇನ್ನೂ ಹೆಚ್ಚಿನ ದರ ಲಭಿಸಬಹುದು ಎಂಬ ಆಶಾಭಾವ ರೈತರಲ್ಲಿದೆ.

ಮೆಟ್ಲಿ ಬಾಳೆ ಬೇಸಿಗೆಯ ದಿನಗಳಲ್ಲಿ ಸರಾಸರಿ 10ರಿಂದ 15 ರೂ. ಪ್ರತಿ ಕೆಜಿಗೆ ದರ ಪಡೆದುಕೊಳ್ಳುತ್ತಿತ್ತು. ಈಗ ರೈತರು ಮಾರುಕಟ್ಟೆಗೆ ತಂದ ಮೆಟ್ಲಿ ಬಾಳೆ 40ರಿಂದ 45 ರೂ. ವರೆಗೆ ಪ್ರತಿ ಕೆಜಿಗೆ ದರ ಪಡೆದುಕೊಳ್ಳುತ್ತಿದೆ. ದ್ವಿತೀಯ ದರ್ಜೆ ಮೆಟ್ಲಿ ಬಾಳೆ ಸಹ 25 ರೂ.ನಂತೆ ದರ ಪಡೆದುಕೊಳ್ಳುತ್ತಿದೆ. 6-7 ರೂ. ಪ್ರತಿ ಕೆಜಿಗೆ ಬೇಸಿಗೆಯಲ್ಲಿ ದರ ಪಡೆದುಕೊಂಡ ಕರಿಬಾಳೆ ಈಗ 25ರಿಂದ 30 ರೂ.ವರೆಗೆ ಮಾರುಕಟ್ಟೆಯಲ್ಲಿ ಖರೀದಿಯಾಗುತ್ತಿದೆ. ಎರಡನೇ ದರ್ಜೆಯ ಕರಿಬಾಳೆ ಗೊನೆಗಳೂ 15ರಿಂದ 20 ರೂ. ವರೆಗೆ ದರ ಪಡೆದುಕೊಳ್ಳುತ್ತಿವೆ.

ಶಿರಸಿ ತಾಲೂಕಿನಲ್ಲಿ ದಾಸನಕೊಪ್ಪ ಮತ್ತು ಬನವಾಸಿ ಭಾಗದಲ್ಲಿ ಸುಮಾರು 2750 ಎಕರೆ ಪ್ರದೇಶದಲ್ಲಿ ರೈತರು ಬಾಳೆಯನ್ನು ಪ್ರಧಾನವಾಗಿ ಬೆಳೆಯುತ್ತಾರೆ. ಆದರೆ, ತಾಲೂಕಿನಾದ್ಯಂತ ರೈತರು ಅಡಕೆ ತೋಟಗಳ ಮಧ್ಯೆ ಬಾಳೆಯನ್ನು ಉಪ ಬೆಳೆಯಾಗಿ ಬೆಳೆಯುವುದು ಹೆಚ್ಚು. ಕಳೆದ ಬೇಸಿಗೆಯಲ್ಲಿ ಬರಗಾಲದ ಸ್ಥಿತಿ ಉಂಟಾಗಿದ್ದರಿಂದ ಬಾಳೆ ಬೆಳೆ ನಿರೀಕ್ಷಿತ ಮಟ್ಟದಲ್ಲಿಲ್ಲ. ಬಾಳೆಕಾಯಿಗಳ ಬೆಳವಣಿಗೆಯೂ ಸಮರ್ಪಕವಾಗದೇ ಬೇಸಿಗೆಯ ದಿನಗಳಲ್ಲಿ ಬಾಳೆಗೊನೆ ಕೇಳುವವರೇ ಇಲ್ಲದೇ ಸಿಕ್ಕಷ್ಟು ದರಕ್ಕೆ ಮಾರಾಟ ಮಾಡಿ ಕೈ ಸುಟ್ಟುಕೊಂಡಿದ್ದರು. ಈಗ ಒಮ್ಮೆಲೇ ಬಾಳೆಗೊನೆಗೆ ದರ ಬಂದಿದ್ದು, ರೈತರಿಗೂ ಅಚ್ಚರಿ ಮೂಡಿಸಿದೆ.

ಗೋವಾದಿಂದ ಬೇಡಿಕೆ ಕಳೆದೊಂದು ವಾರದಿಂದ ಪಕ್ಕದ ಗೋವಾ ರಾಜ್ಯದಿಂದ ಜಿಲ್ಲೆಯ ಬಾಳೆಗೊನೆಗಳಿಗೆ ಬೇಡಿಕೆ ಬರತೊಡಗಿದೆ. ಮಹಾರಾಷ್ಟ್ರದ ಸಾವಂತವಾಡಿ, ಕುಡಾಳದವರೆಗೂ ಗೋವಾದ ವರ್ತಕರು ಜಿಲ್ಲೆಯ ವ್ಯಾಪಾರಸ್ಥರಿಂದ ಖರೀದಿಸಿದ ಬಾಳೆಗೊನೆಗಳನ್ನು ಕಳುಹಿಸುತ್ತಿದ್ದಾರೆ. ಬೇಸಿಗೆಯ ದಿನಗಳಲ್ಲಿ ದಾವಣಗೆರೆ ಭಾಗದಿಂದ ಬಾಳೆಗೊನೆಯನ್ನು ಗೋವಾ ವರ್ತಕರು ಖರೀದಿಸಿದ್ದರಾದರೂ ಈಗ ಅಲ್ಲಿಯ ಬಾಳೆಗೊನೆಗಳು ರಾಜ್ಯದಲ್ಲಿಯೇ ಖಾಲಿಯಾಗುತ್ತಿದೆ. ಹೀಗಾಗಿ, ಗೋವಾದಿಂದ ಇಲ್ಲಿಯ ಬಾಳೆಗೊನೆಗಳಿಗೆ ಬೇಡಿಕೆ ಬಂದಿದೆ. ಇತ್ತೀಚಿನ ವರ್ಷಗಳಲ್ಲಿ ಟಿಎಸ್​ಎಸ್ ಸೇರಿ ನಗರದ ಸಹಕಾರಿ ಸಂಘಗಳೂ ಬಾಳೆಗೊನೆಯನ್ನು ಟೆಂಡರ್ ಮೂಲಕ ಮಾರಾಟ ಮಾಡುತ್ತಿದ್ದು, ಗೋವಾದ ವರ್ತಕರು ಅಲ್ಲಿಯೂ ಖರೀದಿಸಲಾರಂಭಿಸಿದ್ದಾರೆ. ಶಿರಸಿಯಿಂದ ಪ್ರತಿ ದಿನ ಮೂರು ಲಾರಿಯಷ್ಟು ಬಾಳೆಗೊನೆಗಳು ಗೋವಾಕ್ಕೆ ತೆರಳುತ್ತಿವೆ.

ಪ್ರತಿ ವರ್ಷ ಶ್ರಾವಣ ಮಾಸದ ವೇಳೆ ಬಾಳೆಗೊನೆಗಳಿಗೆ ದರ ಬರಲಾರಂಭಿಸುತ್ತಿತ್ತು. ಆದರೆ, ಈ ವರ್ಷ ಮುಂಚಿತವಾಗಿ ಬೇಡಿಕೆ ಮತ್ತು ದರ ಬಂದಿದೆ. | ವೈಭವ ಶೇಟ್, ಬಾಳೆಕಾಯಿ ವ್ಯಾಪಾರಸ್ಥ, ಶಿರಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net