

ಮುಂಡರಗಿ: ರೈತರ ಪಂಪ್‌ಸೆಟ್‌ಗಳಿಗೆ ಹಗಲಿನಲ್ಲಿ ನಿರಂತರ 6 ತಾಸು ತ್ರೀಫೇಸ್ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿ ಪಟ್ಟಣದ ರೈತರು ಸೋಮವಾರ ವಿದ್ಯುತ್ ಪ್ರಸರಣ ಘಟಕದ ಮುಂದೆ ಪ್ರತಿಭಟನೆ ನಡೆಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಶಿವಾನಂದ ಇಟಗಿ ಮಾತನಾಡಿ, ಹೆಸ್ಕಾಂ ಅಧಿಕಾರಿಗಳು ರೈತರ ಪಂಪ್‌ಸೆಟ್‌ಗಳಿಗೆ ಹಗಲು ಸಮಯದಲ್ಲಿ ನಾಲ್ಕು ತಾಸು ಹಾಗೂ ರಾತ್ರಿ ಸಮಯದಲ್ಲಿ ಮೂರು ತಾಸು ತ್ರೀಫೇಸ್ ವಿದ್ಯುತ್ ಪೂರೈಸುತ್ತಿದ್ದಾರೆ. ರಾತ್ರಿ ಜಮೀನಿಗೆ ತೆರಳಿ ಬೆಳೆಗೆ ನೀರು ಹಾಯಿಸುವುದು ಕಷ್ಟವಾಗುತ್ತದೆ. ಹಗಲಿನಲ್ಲಿಯೇ 6 ತಾಸು ತ್ರೀಫೇಸ್ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿದರು.
ರಾತ್ರಿ ವಿದ್ಯುತ್ ಪೂರೈಸಿದರೆ ರೈತರು ಕತ್ತಲಿನಲ್ಲಿ ಜಮೀನಿಗೆ ತೆರಳಿ ನೀರುಹಾಯಿಸುವುದು ತೊಂದರೆಯಾಗುತ್ತದೆ. ಈ ಸಮಯದಲ್ಲಿ ರೈತ ಕೂಲಿ ಕಾರ್ಮಿಕರು ಜಮೀನುಗಳಿಗೆ ತೆರಳಲು ಹಿಂದೇಟು ಹಾಕುತ್ತಾರೆ. ಹಗಲಿನಲ್ಲಿಯೇ ವಿದ್ಯುತ್ ಪೂರೈಸಿದರೆ ರೈತರು ನಿರಾಳವಾಗಿ ಬೆಳೆಗೆ ನೀರು ಹಾಯಿಸಲು ಅನುಕೂಲವಾಗುತ್ತದೆ. ರೈತರಿಗೆ ತೊಂದರೆಯಾಗದಂತೆ ಹೆಸ್ಕಾಂ ಅಧಿಕಾರಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡರು.
ಸ್ಥಳಕ್ಕೆ ಭೇಟಿ ನೀಡಿದ ಹೆಸ್ಕಾಂ ಶಾಖಾಧಿಕಾರಿ ಚನ್ನಪ್ಪ ಲಮಾಣಿ ಅವರು, ರೈತರೊಂದಿಗೆ ಚರ್ಚಿಸಿ, ತಕ್ಷಣವೇ ರೈತರ ಪಂಪ್‌ಸೆಟ್‌ಗಳಿಗೆ ಹಗಲಿನಲ್ಲಿಯೇ 6 ತಾಸು ತ್ರೀಫೇಸ್ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ನಂತರ ರೈತರು ಪ್ರತಿಭಟನೆ ಕೈಬಿಟ್ಟರು.
ರೈತ ಮುಖಂಡರಾದ ಚಂದ್ರಕಾಂತ ಉಳ್ಳಾಗಡ್ಡಿ, ದೇವಪ್ಪ ಚಿಕ್ಕಣ್ಣವರ, ದೇವಪ್ಪ ಮೋರನಾಳ, ಶೇಖಣ್ಣ ಚಿಂಚಲಿ, ದೇವಪ್ಪ ಕಂಬಳಿ, ಷಣ್ಮುಖಪ್ಪ ಹಾಳಕೇರಿ, ಹುಚ್ಚಪ್ಪ ಕಲ್ಲಲ್ಲಿ, ದೇವಪ್ಪ ಕೋವಿ, ಬಂಡೆಪ್ಪ ಕಂಬಳಿ, ಅಡಿವೆಪ್ಪ ಹುಯಿಲಗೋಳ, ಶ್ರೀಧರ ಉಳ್ಳಾಗಡ್ಡಿ, ಬಸಪ್ಪ ಡೊಣ್ಣಿ, ಇತರರಿದ್ದರು.