

ರಾಚಯ್ಯ ಸ್ವಾಮಿ ಮಾಚನೂರು
ರಾಯಚೂರು ಜಿಲ್ಲೆಯಲ್ಲಿ ಕಳೆದ ವಾರದಿಂದ ಸುರಿಯುತ್ತಿರುವ ಮಳೆಯಿಂಂದ ರೈತರ ಮುಖದಲ್ಲಿ ಮಂದಹಾಸ ಮೂಡಿದ್ದು, ಈ ಬಾರಿ ಮುಂಗಾರು ಪೂರ್ವದಲ್ಲೇ ಮಳೆ ಅಬ್ಬರಿಸುತ್ತಿದ್ದರಿಂದ ಪ್ರಸಕ್ತ ಹಂಗಾಮಿಗೆ ಶುಭಸೂಚನೆ ಕಂಡಿದೆ. ರೈತರು ಕೃಷಿ ಚಟುವಟಿಕೆಯತ್ತ ಮುಖ ಮಾಡಿದ್ದಾರೆ. ಇತ್ತ ಕೃಷಿ ಇಲಾಖೆ ಕೂಡ ಮುಂಗಾರು ಹಂಗಾಮಿಗೆ ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜ, ರಸಗೊಬ್ಬರಗಳ ದಾಸ್ತಾನು ಮಾಡಿಕೊಂಡಿದೆ.
ಕಳೆದ ಹಂಗಾಮಿನಲ್ಲಿ ಟಿಬಿಡ್ಯಾಂನಿಂದ ನಾಲೆಗಳಿಗೆ ನೀರು ಸರಿಯಾಗಿ ಸಿಗದೇ ಆನಂತರ ಅಕಾಲಿಕ ಮಳೆಗೆ ಬೆಳೆದ ಭತ್ತವೂ ಹಾಳಾಗಿ ರೈತರು ಆರ್ಥಿಕ ಸಂಕಷ್ಟದಲ್ಲಿದ್ದರು. ಆದರೆ ಈ ಬಾರಿ ಮುಂಗಾರು ಪೂರ್ವದಲ್ಲಿಯೇ ಮಳೆಯಾಗಿದ್ದರಿಂದ ಕುಡಿಯುವ ನೀರಿನ ಸಮಸ್ಯೆ ನೀಗಿಸುವುದರ ಜತೆಗೆ ಬತ್ತಿದ್ದ ಕೊಳವೆ ಬಾವಿಗಳಲ್ಲಿ ನೀರಿನ ಸೆಲೆ ಮೂಡಿದ್ದರಿಂದ ರೈತರು ಬಿತ್ತನ ಕಾರ್ಯಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.
ಕೃಷಿ ಇಲಾಖೆಯಿಂದ ಸಿದ್ದತೆ
ಮೇ ತಿಂಗಳಿನಲ್ಲಿ 30.05 ಮಿಮೀ ಮಳೆಯಾಗಬೇಕಿತ್ತು. ಆದರೆ ನೀರಿಕ್ಷೆಗೆ ಮೀರಿ ಜಿಲ್ಲಾದ್ಯಂತ 46.01 ಮಿಮೀ ಮಳೆಯಾಗಿದ್ದು, ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಪೂರ್ವದಲ್ಲಿ ಉತ್ತಮ ಮಳೆಯಾಗಿರುವುದರಿಂದ ಇತ್ತ ಕೃಷಿ ಇಲಾಖೆ ಕೂಡ ಮುಂಗಾರು ಹಂಗಾಮಿಗೆ ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜ, ರಸಗೊಬ್ಬರಗಳ ದಾಸ್ತಾನು ಮಾಡಿಕೊಂಡಿದೆ. ಪ್ರಸಕ್ತ ಸಾಲಿನಲ್ಲಿ ಮುಂಗಾರಿಗೆ ಜಿಲ್ಲೆಯಲ್ಲಿ 5.5 ಲಕ್ಷ ಹೆಕ್ಟೇರ್‌ನಷ್ಟು ಬಿತ್ತನೆ ಗುರಿ ಹೊಂದಿದ್ದು, ಮುಂಗಾರು ಆರಂಭವೇ ಮುನ್ನವೇ ವಿವಿಧೆಡೆ ಮಳೆ ಸುರಿದ ಪರಿಣಾಮ ಆಗಲೇ ಬಿತ್ತನೆ ಬೀಜಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.
ಹೀಗಾಗಿ ಕೃಷಿ ಇಲಾಖೆ ಬಿತ್ತನೆಗೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಕಳೆದ ವರ್ಷ ಉತ್ತಮ ಮಳೆ ಸುರಿದ ಪರಿಣಾಮ ಹತ್ತಿ ಬಿತ್ತನೆ ಪ್ರಮಾಣ ಹೆಚ್ಚಾಗಿತ್ತು. ಸುಮಾರು 1.76 ಲಕ್ಷ ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಲಾಗಿತ್ತು. ಆದರೆ ಈ ಬಾರಿ 2 ಲಕ್ಷ ಹೆಕ್ಟರ್‌ಗೂ ಅಧಿಕ ಬಿತ್ತನೆಯಾಗುವ ಸಾಧ್ಯತೆ ಕಂಡುಬಂದಿದೆ.
ಕೃಷಿ ಕೇಂದ್ರಗಳತ್ತ ರೈತರ ಚಿತ್ತ
ಮೇ 28ಕ್ಕೆ ಮುಂಗಾರು ಪ್ರವೇಶಿಸುತ್ತದೆಂದು ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ಇದರಿಂದ ರೈತರು ಬಿತ್ತನೆ ಬೀಜ, ಗೊಬ್ಬರ ದಾಸ್ತಾನಿಗೆ ಕೃಷಿ ಕೇಂದ್ರಗಳತ್ತ ಮುಖ ಮಾಡುತ್ತಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ ಸುಮಾರು 17.67 ಲಕ್ಷ ಕ್ವಿಂಟಲ್‌ನಷ್ಟು ಬಿಟಿ ಹತ್ತಿ ಬಿತ್ತನೆ ಬೀಜಗಳು ಸಂಗ್ರಹವಿದೆ. ಒಂದು ವೇಳೆ ಮಳೆ ಕಡಿಮೆಯಾಗಿ ಹತ್ತಿ ಬಿತ್ತನೆ ಕಡಿಮೆಯಾದರೆ ತೊಗರಿ ಪ್ರದೇಶ ಹೆಚ್ಚಾಗುವ ಸಾಧ್ಯತೆಯಿಂದ ಮುಂಜಾಗೃತವಾಗಿ ರೈತರು ಕೃಷಿ ಇಲಾಖೆ,ಕೃಷಿ ವಿಶ್ವವಿದ್ಯಾಲಯ ಹಾಗೂ ಕೃಷಿ ಪರಿಕರಗಳ ಮಳಿಗೆಗಳಿಗೆ ಭೇಟಿ ನೀಡಿ ಬಿತ್ತನೆ ಬೀಜವನ್ನು ಖರೀದಿ ಮಾಡುತ್ತಿದ್ದಾರೆ.
ಜಿಲ್ಲೆಯಲ್ಲಿ ಎಷ್ಟು ರಸಗೊಬ್ಬರ ಬೇಡಿಕೆ
ಈ ಬಾರಿ ಜಿಲ್ಲೆಯಲ್ಲಿ 2,29,778 ಮೆಟ್ರಿಕ್ ಟನ್‌ನಷ್ಟು ವಿವಿಧ ರಸಗೊಬ್ಬರಕ್ಕೆ ಬೇಡಿಕೆ ಇದ್ದು, ಕೃಷಿ ಇಲಾಖೆಯಲ್ಲಿ 56759.194 ಮೆಟ್ರಿಕ್ ಟನ್ ಸಂಗ್ರಹಿಸಲಾಗಿದೆ. ಈ ಪೈಕಿ ಯೂರಿಯಾ-82,959 ಮೆ.ಟನ್, ಡಿಎಪಿ-38,095 ಮೆ.ಟನ್ , ಎಂಒಪಿ-2988ಮೆ.ಟನ್ , ಎನ್‌ಪಿಕೆ -1,04,234 ಮೆ.ಟನ್ , ಎಸ್‌ಎಸ್‌ಪಿ-1502 ಮೆ.ಟನ್ ಲಭ್ಯವಿದೆ. ಆದರೆ ಮುಂಗಾರು ಮಳೆ ಆರಂಭವಾದರೆ ಸಾಕು ಮಾರುಕಟ್ಟೆಯಲ್ಲಿ ನಕಲಿ ಬಿತ್ತನೆ ಬೀಜಗಳ ಹಾವಳಿ, ಗೊಬ್ಬರ ಬಿತ್ತನೆ ಬೀಜಗಳ ಕೃತಕ ಅಭಾವ ಸೃಷ್ಟಿಯಾಗುತ್ತದೆ. ಇದು ಈ ವರ್ಷವೊಂದಲ್ಲ. ಪ್ರತಿ ವರ್ಷವೂ ಈ ಸಮಸ್ಯೆ ಉಲ್ಬಣವಾಗುತ್ತಿದೆ. ಕೃಷಿ ಇಲಾಖೆಯ ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡರೂ ನಿಯಂತ್ರಣವಾಗುವುದಿಲ್ಲ. ಬದಲಾಗಿ ನಕಲ ಬೀಜ ಮಾರಾಟ ಮಾಡುವವರ ವಿರುದ್ದ ಕ್ರಮವಾಗಲಿ ಎಂದು ರೈತರು ಒತ್ತಾಯ ಮಾಡಿದ್ದಾರೆ.
ರಾಯಚೂರು ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಪೂರ್ವದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ 5.5 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ನಮ್ಮ ಇಲಾಖೆಯಿಂದ ಈ ಬಾರಿ 17.17 ಲಕ್ಷ ಪಾಕೇಟ್ ಹತ್ತಿ ಬೀಜಗಳನ್ನು ಕೃಷಿ ಪರಿಕರಗಳ ಮಳಿಗೆಗಳಿಗೆ ವಿತರಣೆ ಮಾಡಲಾಗಿದ್ದೆ. ದುಪ್ಪಟ್ಟು ಹಣಕ್ಕೆ ಬೀಜ ಅಥವಾ ರಸಗೊಬ್ಬರ ಮಾರಾಟ ಮಾಡಿದ್ದರೆ ಪ್ರಕರಣ ದಾಖಲು ಮಾಡಲಾಗುತ್ತದೆ.
ಜಯ ಪ್ರಕಾಶ ಟಿಸಿ ಜಂಟಿ ನಿರ್ದೇಶಕ ಕೃಷಿ ಇಲಾಖೆ ರಾಯಚೂರು