ಇಂಡಿಯಲ್ಲಿ ಉತ್ತಮ ಮಳೆ ರೈತರಲ್ಲಿ ಹರ್ಷ

Farmers rejoice over good rains in Indi
ಇಂಡಿ ಪಟ್ಟಣದ ಹೊರವಲಯದ ಜಮೀನಿನ ಒಡ್ಡುಗಳಲ್ಲಿ ನೀರು ನಿಂತಿರುವುದು.
Published on

ಇಂಡಿ: ತಾಲೂಕಿನಲ್ಲಿ ಶುಕ್ರವಾರ ರಾತ್ರಿ 36.5ಮಿ.ಮೀ ಮಳೆ ಸುರಿದಿದ್ದು, ಶನಿವಾರ ಸಂಜೆ ಮತ್ತೆ 12.8ಮಿ.ಮೀ ಮಳೆಯಾಗಿದೆ. ಭಾನುವಾರವೂ ಜಿಟಿಜಿಟಿ ಮಳೆಯಾಗುತ್ತಿದ್ದು ರೈತರಲ್ಲಿ ಹರ್ಷ ತಂದಿದೆ.

ಮುಂಗಾರು ಆರಂಭದ ರೋಹಿಣಿ ಮತ್ತು ಮೃಗಶಿರ ಎರಡು ಮಳೆಗಳು ಕೈಕೊಟ್ಟಿದ್ದರಿಂದ ರೈತರಲ್ಲಿ ನಿರಾಶೆ ಮೂಡಿತ್ತು. ಬಹುತೇಕ ರೈತರು ತಮ್ಮ ಹೊಲಗದ್ದೆಗಳನ್ನು ಸ್ವಚ್ಛಗೊಳಿಸಿಕೊಂಡು ಬಿತ್ತನೆ ಬೀಜಗಳನ್ನು ಖರೀದಿಸಿ ಮಳೆಗಾಗಿ ಕಾಯುತ್ತಿದ್ದರು. ಮೃಗಶಿರ ಮಳೆಗೆ ಬಿತ್ತನೆ ಮಾಡಬೇಕಿದ್ದ ಬೋನಸ್ ಬೆಳೆ ಹೆಸರನ್ನು ಮಳೆಯಾಗದ ಹಿನ್ನೆಲೆ ಈ ಬಾರಿ ಬಹುತೇಕ ರೈತರು ಬಿತ್ತನೆ ಮಾಡದಂತಾಗಿದೆ.

ಇಂಡಿ 12.7 ಮಿ.ಮೀ, ನಾದ ಕೆಡಿ 2 ಮಿ.ಮೀ, ಅಗರಖೇಡ 21.1 ಮಿ.ಮೀ, ಝಳಕಿ 19.4 ಮಿ.ಮೀ ಮಳೆಯಾಗಿದೆ. ಹೀಗಾಗಿ ರೈತರಲ್ಲಿ ಬಿತ್ತನೆಗೆ ಆಶಾದಾಯಕ ವಾತಾವರಣ ಮೂಡಿಸಿದೆ. ಬಹುದಿನಗಳಿಂದ ಕಾಯ್ದು ಹಂಚಿನಂತಾಗಿದ್ದ ಭೂಮಿ ಸದ್ಯ ತಂಪಾಗಿದ್ದು ಸಂಪೂರ್ಣ ಬಿತ್ತನೆಗೆ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗದಿದ್ದರೂ ತಕ್ಕಮಟ್ಟಿಗೆ ಭೂಮಿ ಹಸಿಯಾಗಿದೆ. ಕೆಲವರು ಹತ್ತಿ ಬೀಜ ನಾಟಿ ಮತ್ತು ತೊಗರಿ ಬಿತ್ತನೆ ಪ್ರಾರಂಭಿಸಲು ಸಜ್ಜಾಗಿದ್ದಾರೆ. ಇನ್ನೂ ಒಂದಿಷ್ಟು ಮಳೆ ಬಿದ್ದಲ್ಲಿ ಬಿತ್ತನೆ ಮಾಡಬಹುದಾಗಿದೆ. ಮುಂದೆ ಮಳೆಯಾಗಬಹುದೆಂಬ ನಿರೀಕ್ಷೆಯಲ್ಲಿ ಬಿತ್ತನೆ ಮಾಡುತ್ತೇವೆ ಎಂದು ರೈತರು ಹೇಳುತ್ತಿದ್ದಾರೆ.

ಸದ್ಯ ತಾಲೂಕಿನ ಕೆಲವು ಕಡೆ ಉತ್ತಮ ರೀತಿಯಲ್ಲಿ ಮಳೆಯಾಗುತ್ತಿದ್ದು ಭೂಮಿ ಹಸಿಯಾಗಿದ್ದು ತೊಗರಿ ಮತ್ತು ಹತ್ತಿ, ಮೆಕ್ಕೆಜೋಳ ಬಿತ್ತಬಹುದು. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ.
ಮಹಾದೇವಪ್ಪ ಏವೂರ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಇಂಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net