

ತ್ಯಾಮಗೊಂಡ್ಲು : ಕ್ವಿನ್ ಸಿಟಿಗಾಗಿ ಕೆಂಚನಪುರದ ಜಮೀನನ್ನು ಸರ್ಕಾರ ಸ್ವಾಧಿನ ಪಡಿಸಿಕೊಂಡು ಎಕರೆಗೆ ಪರಿಹಾರವಾಗಿ ಒಂದು ಕೋಟಿ ಅರವತ್ತು ಲಕ್ಷ ರೂಪಾಯಿ ನೀಡಲು ನಿರ್ಧರಿಸಿದ ವಿಶೇಷ ಜಿಲ್ಲಾಧಿಕಾರಿ ರುನಂದನ್ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.
ಪಟ್ಟಣದ ಕಲ್ಯಾಣ ಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಕೆಂಚನಪುರ ರೈತರ ಸಭೆಯಲ್ಲಿ ವಿಶೇಷ ಜಿಲ್ಲಾಧಿಕಾರಿ, ಕೆಂಚನಪುರದ ಜಮೀನಿಗೆ ಎಕರೆಗೆ 1.60 ಕೊಟಿ ರೂಪಾಯಿ ದರ ನಿಗದಿ ಮಾಡಿ ಸಭೆ ಮುಕ್ತಾಯ ಮಾಡಿ ನಿರ್ಗಮಿಸಿದರು. ಇದರಿಂದ ಕೆರಳಿದ ರೈತರು ಏಕಪಯವಾಗಿ ದರ ನಿಗದಿ ಮಾಡಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ದರವನ್ನು ಒಪ್ಪಲು ಸಾಧ್ಯವಿಲ್ಲ, ಕಾನೂನು ಹೋರಾಟ ಮತ್ತು ಪ್ರತಿಭಟನೆ ಮಾಡುತ್ತೇವೆ ಎಂದು ರೈತರು ಆಕ್ರೋಶ ಹೊರಹಾಕಿದರು.
ಸರ್ವಾಧಿಕಾರಿ ಧೋರಣೆ: ದರ ನಿಗದಿ ಸಭೆಯಲ್ಲಿ ರೈತರೊಂದಿಗೆ ಚರ್ಚೆ ನಡೆಸಿ ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಅಂತಿಮ ದರ ನಿಗದಿಗೊಳಿಸಲಾಗುವುದು ಎಂದು ಹೇಳಿದ ವಿಶೇಷ ಜಿಲ್ಲಾಧಿಕಾರಿ, ಬೆರಳೆಣಿಕೆ ರೈತರ ಸಮಸ್ಯೆ ಆಲಿಸಿ ಸರ್ವಾಧಿಕಾರಿಯಂತೆ ದರ ನಿಗದಿ ಮಾಡಿರುವುದನ್ನು ನಾವು ರೈತರು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ, ನಮ್ಮ ಬೇಡಿಕೆ ಆಲಿಸದೆ ದರ ೂಷಿಸಿ ತಕ್ಷಣ ನಿರ್ಗಮಿಸಿದ್ದು ರೈತರಿಗೆ ಮಾಡಿದ ಅವಮಾನ ಎಂದು ನೆಲಮಂಗಲ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಚನ್ನೇಗೌಡ ಆರೋಪಿಸಿದರು. ಕೊಡಿಗೇಹಳ್ಳಿಯ ರೈತರ ಸಭೆಯಲ್ಲೂ ದರ ನಿಗದಿಯನ್ನು ರೈತರು ವಿರೋಧಿಸಿದ್ದಾರೆ, ರೈತರ ಗಮನಕ್ಕೆ ತರದೆ ಸಭೆಗೆ ಹಾಜರಾದ ರೈತರಿಂದ ಸಹಿ ಪಡೆದು ನಿರ್ಧರಿಸಿದ ದರಕ್ಕೆ ಒಪ್ಪಿದ್ದಾರೆ ಎಂದು ಬಿಂಬಿಸಿದ್ದಾರೆ, ಈ ಸಭೆಯಲ್ಲೂ ಕೆಲ ರೈತರು ಸಹಿ ಮಾಡಿದ್ದಾರೆ, ಆದರೆ ಯಾವುದೇ ಕಾರಣಕ್ಕೂ ಈ ದರವನ್ನು ಒಪ್ಪುವುದಿಲ್ಲ, ಎಕರೆಗೆ ಎರಡು ಕೋಟಿ ನೀಡಿದರೆ ಭೂಮಿ ಕೊಡುತ್ತೇವೆ ಎಂದರು.
ಎಂಟು ವರ್ಷದಿಂದ ತೋಟಗಾರಿಕೆ ಇಲಾಖೆಯವರು ತೋಟದ ಬೆಳೆಗಳ ಮಾರ್ಗದರ್ಶಿ ದರವನ್ನು ಪರಿಷ್ಕರಿಸಿಲ್ಲ, ಹಳೆಯ ದರದಂತೆ ಅಡಕೆ ಗಿಡ ಒಂದಕ್ಕೆ ಆರು ಸಾವಿರ, ತೆಂಗಿನ ಮರಕ್ಕೆ 18 ಸಾವಿರ, ಮಾವಿನ ಮರಕ್ಕೆ 25 ಸಾವಿರ ಇದೆ. ಆದರೆ ಈಗ ಎಲ್ಲ ಕೃಷಿ ಉತ್ಪನ್ನಗಳ ದರ ಹೆಚ್ಚಾಗಿದ್ದು ಅವೈಜ್ಞಾನಿಕವಾಗಿ ದರ ನಿಗದಿ ಮಾಡುತ್ತಿದ್ದಾರೆ, ಕೆಲ ರೈತರ ಜಮೀನಿನಲ್ಲಿರುವ ಅಡಕೆ ಗಿಡದಿಂದ ವರ್ಷಕ್ಕೆ 30 ಲಕ್ಷ ರೂಪಾಯಿ ದುಡಿಯುತ್ತಿದ್ದಾರೆ, ಸರ್ಕಾರ ನೀಡುವ ಹಣವನ್ನು ಮೂರ್ನಾಲ್ಕು ವರ್ಷದಲ್ಲೆ ದುಡಿದುಕೊಳ್ಳುತ್ತಿದ್ದಾರೆ, ಸ್ವಾಧಿನದ ಸುದ್ದಿ ಕೇಳಿದ ರೈತರ ಮನೆಯ ಹಿರಿಯರ ಆರೋಗ್ಯ ವ್ಯತ್ಯಾಸವಾಗಿದೆ ಹೀಗಿದ್ದರೂ ಭೂಸ್ವಾಧಿನಕ್ಕೆ ಮುಂದಾಗಿರುವುದು ದುರದೃಷ್ಟಕರ. ನಾವೇನು ಭೂಮಿ ನೀಡುತ್ತೇವೆ ಎಂದು ಮುಂದೆ ಬಂದಿಲ್ಲ, ದಯವಿಟ್ಟು ನಮ್ಮ ಭಾಗದ ರೈತರು ನೆಮ್ಮದಿಯಿಂದ ಇರುವುದಕ್ಕೆ ಬಿಡಿ ಎಂದು ಹೇಳಿದರು. ತ್ಯಾಮಗೊಂಡ್ಲು ಠಾಣೆಯ ಪಿಎಸ್ಐಗಳಾದ ರಾಮಚಂದ್ರಪ್ಪ, ವಿಜಯಕುಮಾರಿ ಮತ್ತು ಸಿಬ್ಬಿಂದಿ ಬಂದೋಬಸ್ತ್ ನಿರ್ವಹಿಸಿದರು.
ಜನ ಏನು ತಿನ್ನಬೇಕು???: ಒಂದು ಎಕರೆ ಜಮೀನು ಸ್ವಾಧಿನಪಡಿಸಿಕೊಂಡು ನೀಡುವ ಮೊತ್ತ ಕೇವಲ ಎರಡು ನಿವೇಶನ ಕೊಳ್ಳಲು ಸಾಲುತ್ತದೆ, ಕೃಷಿ ಜಮೀನನ್ನು ವಶಪಡಿಸಿಕೊಂಡು ಪೂರ್ಣ ಕೈಗಾರಿಕೆ ಮಾಡಿದರೆ ಜನರು ಏನು ತಿನ್ನಬೇಕು, ಕೊಡುವ ಕೈಗಳನ್ನು ಬೇಡುವ ಕೈಗಳನ್ನಾಗಿ ಸರ್ಕಾರ ಮಾಡುತ್ತಿದೆ ಎಂದು ಗ್ರಾಪಂ ಸದಸ್ಯ ನರಸಿಂಹಮೂರ್ತಿ(ಮನು)
ಆಕ್ರೋಶ ವ್ಯಕ್ತಪಡಿಸಿದರು.
ವಿಶೇಷ ಭೂಸ್ವಾಧಿನಾಧಿಕಾರಿ ಶಿವೇಗೌಡ, ಅಭಿವೃದ್ಧಿ ಅಧಿಕಾರಿ ಲೀಲಾವತಿ, ವ್ಯವಸ್ಥಾಪಕ ಚಂದ್ರಶೇಖರ್, ಎಇ ಮಹೇಂದರ್, ಕಾರೇಹಳ್ಳಿ ಗುರುಪ್ರಕಾಶ್, ಗ್ರಾಪಂ ಸದಸ್ಯ ಶೇಖರ್, ತಡಸೀಟ್ಟ ಡೇರಿ ಅಧ್ಯಕ್ಷ ಲೋಕೇಶ್, ಗೋವಿಂದರಾಜು, ಕುಪ್ಪರಾಜು, ಮುನೇಶ್ಕುಮಾರ್,ಕೆ.ಸಿ.ಕೆಂಪರಾಜು, ಚಂದ್ರಮೋಹನ್ ಸ್ವಾಮೀಜಿ, ಅಶ್ವಥ್ ನಾರಾಯಣ, ಬಳಗೆರೆ ಪ್ರಕಾಶ್, ಕೆಂಚನಪುರ ಸಿದ್ದರಾಜು, ಗಂಗರಾಜು, ಜೈರಾಮಯ್ಯ, ಸಿದ್ದಗಂಗಯ್ಯ, ನರಸೇಗೌಡ, ಜಿ.ಮಂಜುನಾಥ್ ಇದ್ದರು.
ಅರವತ್ತು ವರ್ಷಗಳ ಹಿಂದೆ ನಮ್ಮ ಪೂರ್ವಜರಿಗೆ ಸರ್ಕಾರದಿಂದ ಜಮೀನು ಮಂಜೂರಾಗಿದ್ದು ಅವರ ತಿಳಿವಳಿಕೆ ಕಡಿಮೆ ಇದ್ದು ಜಮೀನಿನ ಕಿಮ್ಮತ್ತು ಕಟ್ಟದೆ ಉಳುಮೆ ಮಾಡುತ್ತಿದ್ದರು. ಇದೀಗ ಆ ಜಮೀನೆಲ್ಲಾ ಸ್ವಾಧಿನವಾಗಿರುವುದರಿಂದ ಚಿಂತೆ ಹೆಚ್ಚಿದೆ. ಸೂಕ್ತ ಕ್ರಮ ಕೈಗೊಂಡು ನ್ಯಾಯ ದೊರಕಿಸಿಕೊಡಿ. > ಮುನಿರಾಜು ರೈತ ಗ್ರಾಮ ಠಾಣವನ್ನು 300 ಮೀಟರ್ಗಳಷ್ಟು ವಿಸ್ತರಿಸಿ ಗ್ರಾಮ ಬೆಳೆಯಲು ಅವಕಾಶ ಮಾಡಿಕೊಡಬೇಕು ಇಲ್ಲದಿದ್ದರೆ ಮುಂದಿನ ಪೀಳಿಗೆಗೆ ಸ್ಥಳ ಇಲ್ಲದಾಗುತ್ತದೆ. > ಸಿದ್ದೇಗೌಡ ರೈತ