

ಲಕ್ಷ್ಮೇಶ್ವರ: ಪಟ್ಟಣ ಸೇರಿ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಭೂಮಿಯನ್ನು ಹದಗೊಳಿಸಿರುವ ರೈತರು ಇದೀಗ ಬಿತ್ತನೆಗೆ ಅಣಿಯಾಗುತ್ತಿದ್ದಾರೆ. ಅದಕ್ಕಾಗಿ ಕೃಷಿ ಕೇಂದ್ರದಲ್ಲಿ ದೊರೆಯುವ ರಿಯಾಯತಿ ದರದ ಬಿತ್ತನೆ ಬೀಜಗಳನ್ನು ಕೊಳ್ಳಲು ಸೋಮವಾರ ಬೆಳಗ್ಗೆಯಿಂದಲೆ ಮುಗಿಬಿದ್ದಿರುವುದು ಕಂಡು ಬಂದಿತು.
ಕೃಷಿ ಕೇಂದ್ರದಲ್ಲಿ ಸೋಮವಾರದಿಂದ ರಿಯಾಯತಿ ದರದಲ್ಲಿ ಹೆಸರು, ತೊಗರಿ ಬೀಜ ವಿತರಿಸಲಾಗುತ್ತಿದೆ. ತಾಲೂಕಿನಲ್ಲಿ ಹೆಚ್ಚಾಗಿ ಹೆಸರು, ಶೇಂಗಾ, ತೊಗರಿ ಬಿತ್ತನೆಗೆ ಇದೀಗ ಸಕಾಲವಾಗಿದೆ. ಹೀಗಾಗಿ, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಕೇಂದ್ರಕ್ಕೆ ಆಗಮಿಸಿದ್ದರು.
ಈ ಬಾರಿ ಒಟ್ಟಾರೆ 32.618 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಹೆಸರು 15 ಕ್ವಿಂಟಾಲ್, ಶೇಂಗಾ 30 ಕ್ವಿಂ., ತೊಗರಿ 30 ಕ್ವಿಂ. ಸಂಗ್ರಹವಿದೆ. ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳು ದೊರೆಯಲಿವೆ. ರೈತರು ಆಧಾರ ಕಾರ್ಡ್, ಉತಾರ ನೀಡಿ ಬೀಜ ಪಡೆಯಬೇಕು. ಅವಶ್ಯಕ ಬಿತ್ತನೆ ಬೀಜಗಳು ಇನ್ನೂ ಬರಲಿದ್ದು, ರೈತರು ಆತಂಕಕ್ಕೊಳಗಾಗದೆ ಸಹಕಾರದಿಂದ ಪಡೆಯಬಹುದಾಗಿದೆ. ಒಂದು ಎಕರೆಗೆ ಒಂದು ಪ್ಯಾಕೆಟ್ ಹೆಸರು ಬೀಜ ನೀಡಲಾಗುವುದು ಎಂದು ಕೃಷಿ ಅಧಿಕಾರಿ ಚಂದ್ರಶೇಖರ ನರಸಮ್ಮನವರ ತಿಳಿಸಿದ್ದಾರೆ.
ತಾಲೂಕು ಭಾರತೀಯ ಕಿಸಾನ ಸಂಘದ ಅಧ್ಯಕ್ಷ ಟಾಕಪ್ಪ ಸಾತಪೂತೆ ಪ್ರತಿಕ್ರಿಯಿಸಿ, ಸರ್ಕಾರ ಗುಣಮಟ್ಟದ ಬೀಜಗಳನ್ನು ವಿತರಿಸಬೇಕು. ಒಬ್ಬ ರೈತನಿಗೆ ಬಿತ್ತನೆ ಬೀಜಗಳ 3 ಪ್ಯಾಕೆಟ್ ನೀಡಲಾಗುತ್ತಿದ್ದು, ಈ ಪ್ರಮಾಣವನ್ನು ಹೆಚ್ಚಿಸಬೇಕು ಎಂದರು.