ಯೂರಿಯಾಕ್ಕಾಗಿ ರೈತರ ಸಾಲು

Published on

ಬಳ್ಳಾರಿ : ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಚೇರಿ ಮುಂಭಾಗದಲ್ಲಿ ಯೂರಿಯಾ ಖರೀದಿಸಲು ರೈತರು ಸರತಿ ಸಾಲಿನಲ್ಲಿ ಚಪ್ಪಲಿ ಬಿಟ್ಟು ಸೋಮವಾರ ಕಾದರು. ಬೆಳಗಿನ ಜಾವದಿಂದ ಸರ್ಕಾರಿ ಸಂಘಗಳಲ್ಲೇ ಗೊಬ್ಬರ ಕೊರತೆಯಿಂದ ರೈತರು ಖಾಸಗಿ ಕೃಷಿ ಕೇಂದ್ರಗಳಿಗೆ ಮುಗಿಬಿದ್ದರು.

ಈಗಾಗಲೇ ಸಕಾಲಕ್ಕೆ ಮಳೆಯಾದ ಹಿನ್ನೆಲೆಯಲ್ಲಿ ಬೆಳೆಗಳಿಗೆ ಯೂರಿಯಾ ಅವಶ್ಯಕತೆಯಿದೆ. ತಾಲೂಕಿನ ಪ್ರಾಥಮಿಕ ಕೃಷಿ ಸಹಕಾರ ಸಂಘಗಳಲ್ಲಿ ಯೂರಿಯಾ ಸಿಗದೆ ಹಾಗೂ ಮಳೆ ಸ್ವಲ್ಪ ಬಿಡುವು ಕೊಟ್ಟ ಕಾರಣ ಬೆಳೆಗಳಿಗೆ ಮೇಲುಗೊಬ್ಬರವಾಗಿ ಬಳಸಲು ಯೂರಿಯಾಕ್ಕೆ ಮುಗಿಬಿದ್ದರು. ಯೂರಿಯಾಕ್ಕಾಗಿ ಬೆಳಗ್ಗೆಯಿಂದ ಕಾದ ರೈತರ ಕೋಪ ಹಾಗೂ ಹತಾಶೆ ಹೆಚ್ಚಿಗೊಂಡಿತು. ಸರ್ಕಾರಿ ಸಹಕಾರಿ ಸಂಘಗಳು ಗೊಬ್ಬರ ಪೂರೈಸಲು ವಿಫಲವಾಗಿರುವುದರಿಂದ ಖಾಸಗಿಯಲ್ಲಿ ದುಪ್ಪಟ್ಟ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದರು. ಒಂದು ಆಧಾರ್ ಕಾರ್ಡ್‌ಗೆ ಕೇವಲ ಒಂದು ಚೀಲ ಗೊಬ್ಬರ ನೀಡಲಾಗುತ್ತಿದ್ದು, ಪ್ರತಿ ಚೀಲದ ಬೆಲೆ ಮೂರು ನೂರು ರೂ. ನಿಗದಿಪಡಿಸಲಾಗಿದೆ. ಗೊಬ್ಬರ ಕೊರತೆಯಿಂದಾಗಿ ಬೆಳೆಗಾರರು ಅತಂಕ ವ್ಯಕಪಡಿಸಿ ತಕ್ಷಣವೇ ಸರಬರಾಜು ಹೆಚ್ಚಿಸಬೇಕು ಎಂದು ಆಗ್ರಹಿಸಿದರು. ಬಿಸಿಲಿನ ತಾಪಕ್ಕೆ ರೈತರು ಸರತಿ ಸಾಲಿನಲ್ಲಿ ನಿಲ್ಲದೆ ಚಪ್ಪಲಿಗಳ ಬಿಟ್ಟು ಯೂರಿಯಾಕ್ಕೆ ಕಾಯುವ ದೃಶ್ಯ ಕಂಡುಬಂತು. ಅಲ್ಲದೆ, ಹೊಸಪೇಟೆ ಹಾಗೂ ಬಳ್ಳಾರಿಗೆ ಸಂಚರಿಸುತ್ತಿದ್ದ ಬಸ್ ತಡೆದು ಪ್ರತಿಭಟನೆ ನಡೆಸಿ ಅಕ್ರೋಶ ಹೊರಹಾಕಿದರು. ಬಳಿಕ ತಹಸೀಲ್ದಾರ್ ಅನಿಲ್‌ಕುಮಾರ ಭೇಟಿ ನೀಡಿ ಪ್ರತಿಭಟನಕಾರರನ್ನು ಮನವೊಲಿಸಿದರು.

ಕೋಟ್... ತಾಲೂಕಿಗೆ ಈಗಾಗಲೇ ಬೇಡಿಕೆ ಇರುವಷ್ಟು ಯೂರಿಯಾವನ್ನು ಸರ್ಕಾರದಿಂದ ಪೂರೈಸಲಾಗಿದೆ. ಸದ್ಯ ಇಂದು 600 ಬ್ಯಾಗ್‌ಗಳನ್ನು ವಿತರಿಸಲಾಗಿದೆ. ಎರಡು ದಿನದೊಳಗೆ ಯೂರಿಯಾ ಸ್ಟಾಕ್ ಬರಲಿದ್ದು ಮತ್ತೆ ವಿತರಿಸಲಾಗುವುದು. ತಾಲೂಕಿನ ಪೊಲೀಸರು ಕಂಪ್ಲಿಯಲ್ಲಿನ ಗಣೇಶ ವಿಸರ್ಜನೆ ಬಂದೋಬಸ್ತ್‌ಗೆ ತೆರಳಿದ್ದರಿಂದ ನೂಕು ನುಗ್ಗುಲು ನಡೆದಿದೆ. ರೈತರಿಗೆ ಯೂರಿಯಾ ಕೊರತೆಯಾಗದಂತೆ ಪೂರೈಸಲು ಕ್ರಮವಹಿಸಲಾಗುವುದು.

- ಅನಿಲ್ ಕುಮಾರ್, ತಹಸೀಲ್ದಾರ್, ಸಂಡೂರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net