ಪಪ್ಪಾಯಿ ದರಕುಸಿತಕ್ಕೆ ರೈತ ತತ್ತರ, ಸೂಲಿಬೆಲೆ ವ್ಯಾಪ್ತಿಯಲ್ಲಿ ಬೆಳೆಗಾರರು ಕಂಗಾಲು, ಬುಡಸಹಿತ ಮರಗಳ ಮಾರಣ ಹೋಮ

09 Sulibele 001
Published on

ಬೆಂ.ಗ್ರಾಮಾಂತರ/ಸೂಲಿಬೆಲೆ: ಮಳೆರಾಯ ಅನ್ನದಾತನ ಜತೆ ಜೂಜಾಟ ಆಡಿದರೆ, ಬೆಲೆ ಕುಸಿತದ ಬರೆ ರೈತಾಪಿ ಜನರನ್ನು ಅಡಕತ್ತರಿಗೆ ಸಿಲುಕಿಸುತ್ತದೆ. ಹವಾಮಾನ ವೈಪರೀತ್ಯದ ನಡುವೆ ಕಾದಾಟ ನಡೆಸುವ ರೈತರು ಬೆಲೆ ಕುಸಿತದ ಹೊಡೆತಕ್ಕೆ ಸಿಲುಕಿ ನಲುಗಿಹೋಗುತ್ತಾರೆ.

ಇಂಥದ್ದೊಂದು ಪರಿಸ್ಥಿತಿಗೆ ಸಿಲುಕಿರುವ ಹೊಸಕೋಟೆ ತಾಲೂಕು ಸೂಲಿಬೆಲೆಯ ಪಪ್ಪಾಯಿ ಬೆಳೆಗಾರರು ದಿಕ್ಕುತೋಚದಂತಾಗಿದ್ದಾರೆ.

ಕರೊನಾ ಲಾಕ್‌ಡೌನ್‌ನಿಂದಾಗಿ ಸಾಕಷ್ಟು ಆರ್ಥಿಕವಾಗಿ ಜರ್ಜರಿತರಾಗಿದ್ದ ತೋಟಗಾರಿಕೆ ಬೆಳೆಗಾರರಿಗೆ ಈಗ ಬೆಲೆ ಕುಸಿತ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ. ಸೂಲಿಬೆಲೆ ಹೋಬಳಿ ವ್ಯಾಪ್ತಿಯ ಹಲವು ರೈತರು ಪಪ್ಪಾಯಿ ಬೆಳೆದು ಉತ್ತಮ ಇಳುವರಿಯೊಂದಿಗೆ ಆದಾಯದ ನಿರೀಕ್ಷೆಯಲ್ಲಿದ್ದರೆ ಅತ್ತ ಮಾರುಕಟ್ಟೆಯಲ್ಲಿ ಪಪ್ಪಾಯಿಗೆ ಬೆಲೆ ಇಲ್ಲದಂತಾಗಿರುವುದು ಬೆಳೆಗಾರರ ಸಹನೆ ಕಟ್ಟೆಯೊಡೆಯುವಂತೆ ಮಾಡಿದೆ. ಕಣ್ಣಮುಂದೆಯೇ ಪಪ್ಪಾಯಿ ಹಣ್ಣಾಗಿ ನೆಲಕ್ಕುರುಳುತ್ತಿರುವುದನ್ನು ಸಹಿಸಲಾಗದೆ ಮರಗಳ ಬುಡಕ್ಕೆ ಕೊಡಲಿ ಪೆಟ್ಟು ಹಾಕ್ಕುತ್ತಿರುವ ದೃಶ್ಯಗಳು ಕಂಡುಬರುತ್ತಿವೆ.

ಶೇಖರಣೆ ಸಾಧ್ಯವಿಲ್ಲ: ಪಪ್ಪಾಯಿ ಬೆಳೆಯನ್ನು ದೀರ್ಘಕಾಲ ಶೇಖರಿಸಿಡಲು ಸಾಧ್ಯವಿಲ್ಲದ ಕಾರಣ ರೈತರ ಪಾಲಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಬೆವರು ಸುರಿಸಿ ಬೆಳೆದ ಬೆಳೆ ಕಣ್ಣಮುಂದೆಯೇ ಕೊಳೆತು ಹೋಗುವುದನ್ನು ನೋಡಲಾರದೆ ಕಣ್ಣೀರು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ರಪ್ತು ಹೆಚ್ಚು: ಬೀದರ್, ಬೆಳಗಾಂ ಸೇರಿ ರಾಮನಗರ ಮತ್ತಿತರ ಜಿಲ್ಲೆಗಳಿಂದ ಈ ಬಾರಿ ಹೆಚ್ಚಿನ ಪಪ್ಪಾಯಿ ಮಾರುಕಟ್ಟೆಗೆ ಬರುತ್ತಿದೆ. ಇದರಿಂದ ಸಹಜವಾಗಿ ಬೆಲೆ ಕುಸಿತ ಕಂಡಿದೆ. ಹೆಚ್ಚಿನ ದರ ಸಿಗುವ ನಿರೀಕ್ಷೆಯಿಂದ ಈ ಬಾರಿ ಜಿಲ್ಲೆ ಸೇರಿ ನೆರೆ ಜಿಲ್ಲೆಯಲ್ಲಿ ಹೆಚ್ಚಿನ ಪಪ್ಪಾಯಿ ಬೆಳೆದಿದ್ದು ಮಾರುಕಟ್ಟೆಯಲ್ಲಿ ಬೆಲೆ ಕುಸಿತಕ್ಕೆ ಕಾರಣವಾಗಿದೆ. ಕರೊನಾ ಕಾರಣದಿಂದ ಹಣ್ಣು ಖರೀದಿಯೂ ಕಡಿಮೆಯಾಗಿದೆ. ಇದೆಲ್ಲ ಕಾರಣದಿಂದ ಬೆಳೆಗಾರರಿಗೆ ನಷ್ಟ ಎದುರಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ ರೈತರು ಕೈಗೊಳ್ಳುವ ಎಲ್ಲ ವೈಯಕ್ತಿಕ ಕಾಮಗಾರಿಗಳಿಗೂ ನಿಗದಿತ ಅವಧಿಯಲ್ಲಿಯೇ ಹಣ ಬಿಡುಗಡೆಯಾಗುತ್ತಿದೆ. ಕೃಷಿ, ತೋಟಗಾರಿಕೆ ಇಲಾಖೆಯ ಯಾವುದೇ ಕಾಮಗಾರಿಯ ಹಣ ತಡೆಹಿಡಿದಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು. ಎನ್.ಎಂ.ನಾಗರಾಜ್, ಜಿಪಂ ಸಿಇಒ ಕರೊನಾ ಸೋಂಕು ಕಾಣಿಸಿಕೊಂಡ ಬಳಿಕ ಎಲ್ಲ ಬಗೆಯ ಹಣ್ಣುಗಳಿಗೂ ಬೆಲೆ ಕುಸಿತವಾಗಿದೆ. ವಿದೇಶಗಳಿಗೆ ರಪ್ತು ನಿಂತುಹೋಗಿದೆ. ಹಬ್ಬಗಳು, ಶುಭಸಮಾರಂಭಗಳಿಲ್ಲದಿರುವುದರಿಂದ ಬೇಡಿಕೆ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಮತ್ತೆ ಬೇಡಿಕೆ ಕುದುರಲಿದೆ. ಪ್ರಶಾಂತ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮುಕ್ಕಾಲು ಎಕರೆಯಲ್ಲಿ ಪಪ್ಪಾಯಿ ಬೆಳೆದಿದ್ದು, ಲಕ್ಷಾಂತರ ರೂ.ವೆಚ್ಚ ಮಾಡಿದ್ದೇನೆ. ನರೇಗಾ ಯೋಜನೆಯಡಿ ಗುಂಡಿ ತೊಡಲು ಕೂಲಿ ಕಾರ್ಮಿಕರಿಗೆ ಹಣ ಬರುತ್ತದೆ ಎನ್ನುತ್ತಾರೆ. ಆದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ದಾಖಲೆ ನೀಡಿ 6 ತಿಂಗಳು ಕಳೆದರೂ ಯಾರೂ ಭೇಟಿ ನೀಡಿಲ್ಲ. ಇಂಥ ಪರಿಸ್ಥಿತಿಯಲ್ಲಿ ನಮ್ಮ ಗತಿಯೇನು? ಜಿ.ವಿ ಸೀನಪ್ಪ, ಪಪ್ಪಾಯಿ ಬೆಳೆಗಾರ ಗಿಡ್ಡಪ್ಪನಹಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net