ವಿವಿಧ ಬೇಡಿಕೆ ಈಡೇರಿಸಲು ರೈತರ ಪ್ರತಿಭಟನೆ

h11-former protest
Published on

ಹುಬ್ಬಳ್ಳಿ: ಬೆಣ್ಣಿ ಹಳ್ಳದಿಂದಾಗುತ್ತಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಶೀಘ್ರ ಅನುದಾನ ಬಿಡುಗಡೆ ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ನವಲಗುಂದ ವಿಧಾನ ಸಭಾ ಕ್ಷೇತ್ರದ ವಿವಿಧ ಗ್ರಾಮಗಳ ರೈತರು, ನಗರದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಬ್ಯಾಹಟ್ಟಿ ಗ್ರಾಮದಿಂದ ಹುಬ್ಬಳ್ಳಿ ಅಂಬೇಡ್ಕರ್ ವೃತ್ತದವರೆಗೆ ಚಕ್ಕಡಿ, ಟ್ರಾೃಕ್ಟರ್ ಮೂಲಕ ರೈತರು ಪ್ರತಿಭಟಿಸಿ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸುಳ್ಳ ಗ್ರಾಮದಿಂದ ಹೆಬಸೂರ ಗ್ರಾಮದವರೆಗಿನ ಹೊಸ ರಸ್ತೆ ನಿರ್ಮಾಣ ಕಾಮಗಾರಿ ಕಳಪೆಯಾಗಿದ್ದು, ಅದನ್ನು ಮರು ನಿರ್ಮಾಣ ಮಾಡಬೇಕು. ನವಲಗುಂದ ಕ್ಷೇತ್ರದ ಪ್ರತಿ ಗ್ರಾಮದ ರಸ್ತೆ ಹಾಗೂ ರೈತರ ಹೊಲಕ್ಕೆ ಹೋಗುವ ರಸ್ತೆ ನಿರ್ಮಿಸಬೇಕು. ರೈತರ ಕೃಷಿ ಸಾಲ ಮನ್ನಾ ಮಾಡಬೇಕು. 2023ರಿಂದ 2025 ಸಾಲಿನವರೆಗೆ ಬೆಳೆ ವಿಮೆ ಬಿಡುಗಡೆ ಮಾಡಬೇಕು. ಅತಿ ಮಳೆಯಿಂದ ಬೆಣ್ಣಿ ಹಳ್ಳ ಪಕ್ಕದ ಗ್ರಾಮಗಳ ರೈತರ ಹೊಲಗಳಿಗೆ ನೀರು ಸೇರಿ ಬೆಳೆ ಹಾಳಾಗಿದ್ದು, ಇದಕ್ಕೆ ತಕ್ಷಣ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಪಂಚಾಯಿಯಿ ಮಾಜಿ ಉಪಾಧ್ಯಕ್ಷ ಶಿವಾನಂದ ಕರಿಗಾರ, ಗ್ರಾಮದ ರಸ್ತೆಗಳು ಹಾಳಾಗಿವೆ. ರೈತರು ಹೊಲಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಕೂಡಲೇ ನಮ್ಮ ಬೇಡಿಕೆ ಈಡೇರಿಸಬೇಕು. ಇಲ್ಲವಾದಲ್ಲಿ ನವಲಗುಂದ, ನರಗುಂದ ಬಂಡಾಯದಂತೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ರವಾನಿಸಲಾಯಿತು.

ರೈತ ಮುಖಂಡರಾದ ಗುರು ರಾಯನಗೌಡ, ಅಶೋಕ ಕಲ್ಲನವರ, ಪಕ್ಕಣ್ಣ ಯಡ್ರಾವಿ, ಶಿವಾನಂದ ಹೂಗಾರ, ಚನ್ನಪ್ಪ ಕನ್ನೂರ, ಬರಪ್ಪ ತಿರಕಪ್ಪನವರ, ಶಿವಾನಂದ ಹಲಗತ್ತಿ, ಅಶೋಕ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net