

ಮೈಸೂರು: ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಗೆ ಒತ್ತಾಯಿಸಿ ನ.2 ರಂದು ಬೆಳಗ್ಗೆ 11ಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗು ವುದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.
ರಾಜ್ಯದಲ್ಲಿ ಎಸ್‌ಎಪಿ ಕಾಯ್ದೆ ಜಾರಿಗೆ ಬಂದ ನಂತರ ಕಳೆದ ಮೂರು ವರ್ಷಗಳಿಂದ ಸಕ್ಕರೆ ಕಾರ್ಖಾನೆಗಳು ಸಕ್ಕರೆ ಇಳುವರಿ ಕಡಿಮೆ ತೋರಿಸಿ ರೈತರಿಗೆ ಅನ್ಯಾಯ ಮಾಡುತ್ತಿದೆ. ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆಗಳು ಸಕ್ಕರೆ ಇಳುವರಿ ಪ್ರಮಾಣವನ್ನು ಶೇ.1 ರಿಂದ 1.50ರವರೆಗೆ ಕಡಿಮೆ ತೋರಿಸುತ್ತಿದೆ. ಶೇ.1 ರಷ್ಟು ಇಳಿಕೆಯಾದರೆ ರೈತರಿಗೆ 285 ರೂ. ನಷ್ಟ ಉಂಟಾಗುತ್ತದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ವ್ಯಾಪ್ತಿಯಲ್ಲಿ ಕಬ್ಬಿನ ಇಳುವರಿ ಶೇ.11ರಷ್ಟು ಇತ್ತು. ಆದರೆ, ಇದೀಗ ಶೇ.9.30, 9.45 ಮಾತ್ರ ಇಳುವರಿ ಇದೆ ಎಂದು ಕಾರ್ಖಾನೆ ಸುಳ್ಳು ವರದಿ ನೀಡುತ್ತಿದೆ. ಇಷ್ಟು ಮಾತ್ರವಲ್ಲದೆ ಕಾರ್ಖಾನೆ ಒಂದು ಟನ್ ಕಬ್ಬಿನ ಮೇಲೆ 25 ರೂ. ಕಡಿಮೆ ದರ ನೀಡುತ್ತಿದೆ. ಕಾರ್ಖಾನೆಗಳಿಂದ ರೈತರಿಗೆ ಇಷ್ಟೆಲ್ಲ ಅನ್ಯಾಯ ಆಗುತ್ತಿದ್ದರೂ ಸರ್ಕಾರ ಅನ್ಯಾಯ ಸರಿಪಡಿಸುವ ಗೋಜಿಗೆ ಹೋಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕದಲ್ಲಿ ಲಕ್ಷಾಂತರ ಎಕರೆ ಬೆಳೆ ನಾಶವಾಗಿದೆ. 184 ಹಳ್ಳಿಗಳು ಪ್ರವಾಹದಿಂದ ಮುಳುಗಿ ಹೋಗಿವೆ. ಪ್ರವಾಹ ಕಾಣಿಸಿ ಕೊಂಡಿರುವ ಹಳ್ಳಿಗಳನ್ನು ಕೂಡಲೇ ಸ್ಥಳಾಂತ ಮಾಡಲು ಸರ್ಕಾರ ಕ್ರಮ ವಹಿಸಬೇಕು. ಸರ್ಕಾರ ಆರ್ಥಿಕ ಸಂಪನ್ಮೂಲದ ಕೊರತೆ ಇದೆ ಎಂಬ ನೆಪ ಒಡ್ಡುವುದು ಬೇಡ. ದೇಶದ ವಿವಿಧ ಪ್ರತಿಷ್ಠಿತ ಕಂಪನಿಗಳ ಬಳಿ ಮನವಿ ಮಾಡಿಕೊಂಡು ಕಂಪನಿಗಳು ಗ್ರಾಮಗಳನ್ನು ದತ್ತು ಸ್ವೀಕರಿಸುವಂತೆ ಸರ್ಕಾರ ಮಾಡಬೇಕು. ಕಂಪನಿಗಳು ಗ್ರಾಮದಲ್ಲಿ ಕೈಗೊಳ್ಳುವ ಕಾಮಗಾರಿಗೆ ತೆರಿಗೆ ವಿನಾಯಿತಿ ನೀಡಬೇಕೆಂದು ಆಗ್ರಹಿಸಿ ದರು. ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಅತ್ತಹಳ್ಳಿ ದೇವರಾಜ್, ರಾಮೇಗೌಡ, ವೆಂಕಟೇಶ್, ಮಹದೇವಸ್ವಾಮಿ, ಬಸವರಾಜ್ ಇತರರು ಇದ್ದರು.