

ವಿಜಯಪುರ: ಆಲಮಟ್ಟಿಯ ಲಾಲ ಬಹದ್ದೂರ್ ಶಾಸ್ತ್ರಿ ಜಲಾಶಯದ ನೀರಿನ ಮಟ್ಟವನ್ನು 519.60 ರಿಂದ 524.256ಕ್ಕೆ ಹೆಚ್ಚಿಸುವುದು ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಿ ಶೀಘ್ರದಲ್ಲಿ ಅಧಿಸೂಚನೆ ಹೊರಡಿಸಲು ಆಗ್ರಹಿಸಿ ಜೂ.30ರಂದು ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಅಖಂಡ ಕರ್ನಾಟಕ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ತಿಳಿಸಿದರು.
ಅಂದು ಬೆಳಗ್ಗೆ 11ಕ್ಕೆ ನಿಡಗುಂದಿ ಬಳಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸಾವಿರಾರು ರೈತರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆಂದು ಸೋಮವಾರ ಕನ್ನಡ ಸಾಹಿತ್ಯ ಪರಿಷತ್ ಸಭಾಭವನದಲ್ಲಿ ಅವರು ಸುದ್ದಿಗೋಷ್ಠಿ ನಡೆಸಿದರು.
ಮಹಾರಾಷ್ಟ್ರ ಸರ್ಕಾರ ದುರುದ್ದೇಶದಿಂದ ಉತ್ತರ ಕರ್ನಾಟಕದ ರೈತರನ್ನು ಬಲಿ ತೆಗೆದುಕೊಳ್ಳಲು ಹೊರಟಿದೆ. ಆಲಮಟ್ಟಿಯ ಅಣೆಕಟ್ಟೆ ಎತ್ತರಿಸುವುದಕ್ಕೂ ಮಹಾರಾಷ್ಟ್ರದ ಭಾಗದಲ್ಲಿ ಉಂಟಾಗುತ್ತಿರುವ ಪ್ರವಾಹಕ್ಕೂ ಯಾವುದೇ ಸಂಬಂಧವಿಲ್ಲ. ಹಾಗಂತ ಮಹಾರಾಷ್ಟ್ರದ ತಜ್ಞರ ತಂಡವೇ ವರದಿ ನೀಡಿದೆ. ಆದರೂ ಅದನ್ನು ಗಣನೆಗೆ ತೆಗೆದುಕೊಳ್ಳದೆ ರೈತರನ್ನು ಎತ್ತಿಕಟ್ಟಿ ಬೀದಿಗಿಳಿದು ಹೋರಾಟ ಮಾಡಿ ತಮ್ಮ ಭಂಡತನವನ್ನು ಪ್ರದರ್ಶಿಸುತ್ತಿದೆ. ಇದಕ್ಕೆ ಕರ್ನಾಟಕ ಸರ್ಕಾರ ತಕ್ಕ ಉತ್ತರ ನೀಡಬೇಕೆಂದು ಆಗ್ರಹಿಸುವುದಾಗಿ ತಿಳಿಸಿದರು.
ಮುಖಂಡ ಶ್ರೀವಿಜಯ ಪೂಜಾರ ಮಾತನಾಡಿ, ರಾಜ್ಯ ಸರ್ಕಾರ ನ್ಯಾಯಾಧೀಕರಣದ ತೀರ್ಪಿನಂತೆ ಕ್ರಮ ಕೈಗೊಳ್ಳಬೇಕು. ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು ಮತ್ತು ಕೇಂದ್ರ ಸರ್ಕಾ ಕೂಡ ಆಲಮಟ್ಟಿಯ ಲಾಲ ಬಹಾದ್ದೂರ ಶಾಸ್ತ್ರಿ ಜಲಾಶಯದ ನೀರಿನ ಮಟ್ಟವನ್ನು 524.256ಕ್ಕೆ ನಿಲ್ಲಿಸಲು ಕೂಡಲೇ ಅಧಿಸೂಚನೆ ಹೊರಡಿಸಬೇಕು. ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯೆಂದು ಘೋಷಿಸಬೇಕೆಂದು ಹೋರಾಟದ ಮೂಲಕ ಆಗ್ರಹಿಸುವುದಾಗಿ ತಿಳಿಸಿದರು.
ಮುಖಂಡರಾದ ಶಂಕರ ಹಿರೇಗೌಡರ, ಶಾರದಾ ಕಾಳಮ್ಮನವರ, ಸುಜಾತ ಬಂಡಿವಡ್ಡರ, ಗುಡುಮಾ ವಾಲೀಕಾರ, ಮಂಜುಳಾ ಹನುಮದ, ನಿಂಗವ್ವ ಸಿಂಗಾನವರ, ಆರ್.ಕೆ. ಕಲಬುರಗಿ, ಬಸವರಾಜ ಗೋನಾಳ ಮತ್ತಿತರರಿದ್ದರು.