

ಮಂಡ್ಯ: ನಾಲೆಗಳ ಆಧುನೀಕರಣವನ್ನು ಮತ್ತೆ ಪ್ರಾರಂಭಿಸುತ್ತಿರುವುದರಿಂದ ಮುಂದಿನ ಬೇಸಿಗೆ ಬೆಳೆಗೆ ನೀರು ಸಿಗಲಿದೆಯೇ ಅಥವಾ ಇಲ್ಲವೋ ಎನ್ನುವ ರೈತರಿಗೆ ಕಾಡುತ್ತಿರುವ ಆತಂಕದ ನಡುವೆ ಜ.7ರಂದು ನೀರಾವರಿ ಸಲಹಾ ಸಮಿತಿ ಸಭೆ ಆಯೋಜಿಸಲಾಗಿದೆ. ಇಲ್ಲಿ ತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ಕುತೂಹಲ ಮೂಡಿದೆ.
ನಾಲೆ ಆಧುನೀಕರಣದ ನೆಪದಲ್ಲಿ ನಾಲೆಗೆ ನೀರು ಸ್ಥಗಿತಗೊಳಿಸುವುದು ಬೇಡ ಎಂದು ವಿಧಾನ ಪರಿಷತ್ ಸದಸ್ಯ ಮಧು ಮಾದೇಗೌಡ ಸ್ವಪಕ್ಷದ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಇದರ ಬೆನ್ನಲ್ಲೇ ಸೋಮವಾರ ನಗರದಲ್ಲಿ ರೈತರು ಪ್ರತಿಭಟನೆ ನಡೆಸಿ ನಾಲೆಗೆ ನೀರು ಹರಿಸಬೇಕೆಂದು ಆಗ್ರಹಿಸಿದ್ದಾರೆ. 7ರಂದು ಮಧ್ಯಾಹ್ನ 2.30ಕ್ಕೆ ಕೆಆರ್‌ಎಸ್‌ನ ಕಾವೇರಿ ಸಭಾಂಗಣದಲ್ಲಿ 2024-25ನೇ ಸಾಲಿನ ಸಾಲಿನ ಎರಡನೇ ನೀರಾವರಿ ಸಲಹಾ ಸಮಿತಿ ಸಭೆ ಕರೆಯಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಆಯೋಜಿಸಿರುವ ಸಭೆಯಲ್ಲಿ ಶಾಸಕರು, ಅಧಿಕಾರಿಗಳು ಭಾಗಿಯಾಗಲಿದ್ದಾರೆ.
ಕೆಆರ್‌ಎಸ್ ಅಣೆಕಟ್ಟೆಯಿಂದ ನಾಲೆಗಳಿಗೆ ನೀರು ಹರಿಸಲು ಜ.7ರಂದು ಆಯೋಜಿಸಿರುವ ನೀರಾವರಿ ಸಲಹಾ ಸಮಿತಿಯಲ್ಲಿ ನಿರ್ಧಾರ ಘೋಷಣೆ ಮಾಡಬೇಕೆಂದು ಆಗ್ರಹಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಮತ್ತು ವಿವಿಧ ಸಂಘಟನೆಯ ಮುಖಂಡರು ಪ್ರತಿಭಟನೆ ನಡೆಸಿದರು.
ಸರ್‌ಎಂ.ವಿ ಪ್ರತಿಮೆ ಎದುರು ಜಮಾಯಿಸಿದ ಕಾರ್ಯಕರ್ತರು, ಬೆಂಗಳೂರು-ಮೈಸೂರು ಹೆದ್ದಾರಿ ವಾಹನ ಸಂಚಾರಕ್ಕೆ ಕೆಲಕಾಲ ಅಡ್ಡಿಪಡಿಸಿ ಘೋಷಣೆ ಕೂಗಿದರು. ಪ್ರಸ್ತುತದಲ್ಲಿ ಭತ್ತ ಮತ್ತು ಕಬ್ಬು ಕಟಾವು ಮಾಡಲಾಗಿದೆ. ಇನ್ನೂ ಕೆಲವು ಕಡೆ ಹಾಗೆಯೇ ಇದೆ, ಹೀಗಿದ್ದರೂ ಅಣೆಕಟ್ಟೆಯಿಂದ ನೀರು ನಿಲ್ಲಿಸಿರುವುದು ಸರಿಯಲ್ಲ. ಜಿಲ್ಲೆಯ ಕೊನೆ ಭಾಗಗಳಿಗೆ ನೀರು ತಲುಪಲು ದುಸ್ತರವಾಗಿರುವ ಸನ್ನಿವೇಶದಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆ ಕೊಡುವ ಉದ್ದೇಶದಿಂದಲೇ ರಾಜ್ಯಸರ್ಕಾರ ನಾಲೆ ಆಧುನೀಕರಣ ಮಾಡುವ ನಿರ್ಧಾರ ತೆಗೆದುಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ತಕ್ಷಣ ನಾಲೆಗೆ ಹರಿಸುವ ನಿರ್ಧಾರವನ್ನು ನೀರಾವರಿ ಸಲಹಾ ಸಮಿತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು. ಈ ಹಿಂದೆ ನೀರನ್ನು ತಮಿಳುನಾಡಿಗೆ ಕಾವೇರಿ ನೀರು ಹರಿಸಿದ್ದರಿಂದ ಕಾವೇರಿ ಕೊಳ್ಳದ ರೈತರಿಗೆ ಎರಡು ಬೆಳೆ ಬೆಳೆಯಲು ಸಾಧ್ಯವಾಗದೇ ನಷ್ಟವಾಯಿತು. ಇದರ ನಷ್ಟವನ್ನು ಸರ್ಕಾರ ಕೊಡಲಿಲ್ಲ. ನಾಲೆಗಳ ಆಧುನೀಕರಣ ಬೇಡವೆಂದು ಹೇಳುತ್ತಿಲ್ಲ. ಆದರೆ ಕಟ್ಟು ಪದ್ಧತಿಯಲ್ಲಿ ನೀರನ್ನು ಹರಿಸಬೇಕು. ನಿಲ್ಲಿಸಿದಾಗ ನಾಲಾ ದುರಸ್ತಿ ಕೆಲಸ ಮಾಡಿಸಿಕೊಳ್ಳಲಿ. ನೀರು ನಿಲ್ಲಿಸಿರುವುದರಿಂದ ಈಗ ಬೆಳೆದು ನಿಂತಿರುವ ಬೆಳೆಯ ಗತಿಯೇನು?. ನಿರಂತರವಾಗಿ ನೀರು ನಿಲ್ಲಿಸುವುದಕ್ಕೆ ನಮ್ಮ ವಿರೋಧವಿದೆ. ಈ ಸರ್ಕಾರ ರೈತರಿಗೆ ತೊಂದರೆ ಕೊಡುವುದಕ್ಕೆ ಇದೆ ಎನ್ನುವಂತೆ ನಡೆದುಕೊಳ್ಳುತ್ತಿದೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಮಾಣ ಹೆಚ್ಚಿದೆ. ಇದಕ್ಕೆ ಕಾರಣ ಕಾಂಗ್ರೆಸ್ ಸರ್ಕಾರ. ಸಾರಿಗೆ ಪ್ರಯಾಣ ದರ ಹೆಚ್ಚಾಗಿದೆ. ರಾಸಾಯನಿಕ ಗೊಬ್ಬರ ಬೆಲೆಯನ್ನೂ ಹೆಚ್ಚಳ ಮಾಡಲಾಗಿದೆ. ಇದೆಲ್ಲವನ್ನು ಸರಿದೂಗಿಸುವುದೇ ಕಷ್ಟವಾಗಿರುವಾಗ ಇದರ ಬಗ್ಗೆ ಆಲೋಚನೆ ಮಾಡಿ ಸರ್ಕಾರ ಸೂಕ್ತ ನಿರ್ಧಾರಕ್ಕೆ ಬಂದು ಜನರ ಮತ್ತು ರೈತರ ಪರವಾಗಿ ನಿಲ್ಲಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜೇಶ್‌ಗೌಡ ದೊಡ್ಡಪಾಳ್ಳ ಮಾತನಾಡಿ, ತಮಿಳುನಾಡಿಗೆ ಕಾವೇರಿ ನೀರನ್ನು ಬಿಟ್ಟಿರುವ ಕಾರಣದಿಂದಲೇ ಕಾವೇರಿ ಕೊಳ್ಳದ ರೈತರು ಅಪಾರ ನಷ್ಟವನ್ನು ಅನುಭವಿಸುವಂತಾಗಿದೆ. ಕೆಆರ್‌ಎಸ್ ಅಣೆಕಟ್ಟೆಯಲ್ಲಿ ನೀರು ತುಂಬಿದ್ದರೂ ನಾಲೆಗಳಿಗೆ ನೀರು ಹರಿಸದಿರುವ ಕ್ರಮ ಸರಿಯಲ್ಲ. ಕೂಡಲೇ ಸರ್ಕಾರ, ಜಿಲ್ಲಾಡಳಿತ ನೀರು ಹರಿಸುವ ಮೂಲಕ ರೈತರನ್ನು ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್, ಶಿವಳ್ಳಿ ಚಂದ್ರಶೇಖರ್, ಪ್ರಭುಲಿಂಗು, ಗೋಪಾಲಪುರ ಸುರೇಶ್, ಸೋ.ಶಿ.ಪ್ರಕಾಶ್, ಬೋರಲಿಂಗೇಗೌಡ, ಪಟೇಲ್ ರಾಮಣ್ಣ, ಹೊಳಲು ಸಂತೋಷ್, ಅಣ್ಣೂರು ಸಿದ್ದೇಗೌಡ, ನಾಗಪ್ಪ ಇತರರಿದ್ದರು.