ಟನ್ ಕಬ್ಬಿಗೆ 5 ಸಾವಿರ ರೂ ನಿಗದಿಗೆ ಆಗ್ರಹ: ರೈತ ಸಂಘದ ಕಾರ್ಯಕರ್ತರ ಪ್ರತಿಭಟನೆ

Farmers protest Mandya
Published on

ಮಂಡ್ಯ: ಪ್ರತಿ ಟನ್ ಕಬ್ಬಿಗೆ 5 ಸಾವಿರ ರೂ ನಿಗದಿ ಮಾಡುವುದು ಹಾಗೂ ಕಬ್ಬಿಗೆ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಕೆಲವೊತ್ತು ಹೆದ್ದಾರಿ ಸಂಚಾರ ತಡೆ ನಡೆಸಿದರು. ಬಳಿಕ ಬೈಕ್ ಜಾಥಾ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಕಳೆದ ಏಳೆಂಟು ವರ್ಷದಿಂದಲೂ ಕಬ್ಬಿಗೆ ಸಮರ್ಪಕವಾದ ಬೆಲೆ ನಿಗದಿ ಮಾಡಿಲ್ಲ. ಪರಿಣಾಮ ರೈತರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಈ ನಡುವೆ ಕರೊನಾ ಮತ್ತು ಬರದಿಂದ ತತ್ತರಿಸಿ ಜೀವನ ನಡೆಸುವುದೇ ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಿ ರೈತರನ್ನು ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಕಬ್ಬು 18 ತಿಂಗಳು ತುಂಬುತ್ತಿದ್ದರೂ ಕಾರ್ಖಾನೆಯವರು ಕಟಾವು ಮಾಡದೇ ವಿಳಂಬ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶೀಘ್ರ ಕಬ್ಬು ಕಟಾವಿಗೆ ಕ್ರಮ ವಹಿಸುವಂತೆ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳಬೇಕು. ಮುಖ್ಯವಾಗಿ ದಸರಾ ಮುಗಿಯುವುದರೊಳಗೆ ಕಬ್ಬಿಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಇಲ್ಲದಿದ್ದಲ್ಲಿ ರೈತರು ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ನಿಂಗೇಗೌಡ, ಕೋಣನಹಳ್ಳಿ ಮಂಜು, ನಾಗರಾಜು, ಚಂದ್ರು, ರಾಮಲಿಂಗೇಗೌಡ, ಜಿ.ಎನ್. ಸುರೇಶ, ಬಿ.ಶ್ರೀನಿವಾಸ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net