

ಮಂಡ್ಯ: ರೈತರು ತಾವು ಬೆಳೆದಿರುವ ಕಬ್ಬನ್ನು ಯಾವುದೇ ಕಾರ್ಖಾನೆಗಾದರೂ ಪೂರೈಕೆ ಮಾಡಲು ಅವಕಾಶ ನೀಡುವಂತೆ ಆಗ್ರಹಿಸಿ ಮೈಷುಗರ್ ವ್ಯಾಪ್ತಿಯ ಕಬ್ಬು ಬೆಳೆಗಾರರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದ ರೈತರು, ಜಿಲ್ಲಾಡಳಿತ ಅವೈಜ್ಞಾನಿಕವಾಗಿ ವಿಧಿಸಿರುವ ನಿರ್ಬಂಧವನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿದರು. ಕಳೆದ ವರ್ಷ ಬರಪೀಡಿತವೆಂದೂ ಘೋಷಣೆ ಮಾಡಿದರೂ ಸರ್ಕಾರದಿಂದ ಪರಿಹಾರ ಬಂದಿಲ್ಲ. ಅಂತೆಯೇ ನಾಲೆ ಆಧುನೀಕರಣದ ನೆಪವೊಡ್ಡಿ ನೀರನ್ನು ಕೊಡಲಿಲ್ಲ. ಪರಿಣಾಮ ರೈತರು ಆರ್ಥಿಕ ನಷ್ಟ ಅನುಭವಿಸುವಂತಾಯಿತು. ಇಷ್ಟಾದರೂ ರೈತರು ಬೋರ್‌ವೆಲ್ ನೀರನ್ನು ಬಳಸಿಕೊಂಡು ಕಬ್ಬು ಬೆಳೆದಿದ್ದಾರೆ. ಆದರೆ ಜೂನ್‌ನಲ್ಲಿ ಮೈಷುಗರ್ ಕಾರ್ಖಾನೆ ಪ್ರಾರಂಭ ಮಾಡುತ್ತೇವೆಂದು ಜಿಲ್ಲಾಡಳಿತ ಹೇಳಿತ್ತಾದರೂ ಯಾವುದೇ ಪೂರ್ವ ತಯಾರಿ ಮಾಡಿಕೊಳ್ಳಲಿಲ್ಲ. ಇದರಿಂದಾಗಿ 15 ತಿಂಗಳಾದರೂ ಕಬ್ಬು ಕಟಾವು ಮಾಡಿಸಲಾಗದೇ ರೈತರು ಕಂಗಲಾಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಇದಲ್ಲದೆ ಜಿಲ್ಲೆಯ ಇತರೆ ಕಾರ್ಖಾನೆಗಳು ಕೂಡ ಮುಂಚಿತವಾಗಿ ಪ್ರಾರಂಭ ಮಾಡದಂತೆ ಜಿಲ್ಲಾಡಳಿತ ಸೂಚನೆ ನೀಡಿತು. ಜತೆಗೆ ಮೈಷುಗರ್ ವ್ಯಾಪ್ತಿಯ ಕಬ್ಬನ್ನು ಬೇರೆ ಕಾರ್ಖಾನೆ ಖರೀದಿಸದಂತೆ ಆದೇಶ ಹೊರಡಿಸಿತು. ಇದು ಕಬ್ಬು ಬೆಳೆಗಾರರನ್ನು ಸಂಕಷ್ಟಕ್ಕೆ ಸಿಲುಕಿದೆ. ಆದ್ದರಿಂದ ರೈತರು ತಮ್ಮ ಬೆಳೆಯನ್ನು ಎಲ್ಲಿಯಾದರೂ ಮಾರಾಟ ಮಾಡಲು ಸಹಕಾರಿ ಕಾಯ್ದೆಯನ್ವಯ ಅವಕಾಶ ನೀಡಬೇಕು. ಕಬ್ಬು ಬೇಗ ಕಟಾವಾದರೆ ಹೈನುಗಾರಿಕೆಗೆ ಸಂಬಂಧಿಸಿದ ಬೆಳೆಯನ್ನು ಬೆಳೆಯಬಹುದು. ಇಲ್ಲದಿದ್ದರೆ ಬರದಿಂದ ತತ್ತರಿಸಿರುವ ರೈತರು ಮತ್ತಷ್ಟು ನಷ್ಟಕ್ಕೆ ಒಳಗಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕಬ್ಬು ಬೆಳೆಗಾರರಾದ ಬಿ.ಪಿ.ಅಪ್ಪಾಜಿ, ಶಿವಣ್ಣ, ಮಹೇಶ್, ಕೃಷ್ಣೇಗೌಡ, ಮಹದೇವಪ್ಪ, ಮಲ್ಲೇಶ್ ಇತರರಿದ್ದರು.