ಹಸಿ ಬರಗಾಲ'ಕ್ಕೆ ಆಗ್ರಹಿಸಿ ಕಲಬುರಗಿ ಬಂದ್‌

IMG-20251013-WA0000
Published on

ಕಲಬುರಗಿ: ಅತಿವೃಷ್ಟಿ ಮತ್ತು ನೆರೆ ಹಾವಳಿಯಿಂದ ಉಂಟಾದ ತೀವ್ರ ಬೆಳೆ ಹಾನಿ ಹಿನ್ನೆಲೆ ಕಲಬುರಗಿ ಜಿಲ್ಲೆಯನ್ನು ತಕ್ಷಣವೇ 'ಹಸಿ ಬರಗಾಲ' ಪ್ರದೇಶವೆಂದು ಘೋಷಿಸಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ರೈತ, ದಲಿತ, ಕನ್ನಡಪರ, ಮಹಿಳಾ ಪರ, ವಿದ್ಯಾರ್ಥಿ ಸಂಘಟನೆಗಳು, ಕಾರ್ಮಿಕ ಪರ ಸಂಘಟನೆಗಳು ಸೋಮವಾರ ಕಲಬುರಗಿ ಬಂದ್ ಆಚರಣೆ ಆರಂಭವಾಯಿತು.

ನಗರದ ಕೇಂದ್ರ ಬಸ್ ನಿಲ್ದಾಣದ ಬಳಿ ಬೆಳ್ಳಂಬೆಳ್ಳಗೆ ನೂರಾರು ರೈತರು ಜಮಾವಣೆಗೊಂಡು ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಘೋಷಣೆ ಕೂಗಿ, ಬೊಬ್ಬೆ ಹೊಡೆಯುವ ಮೂಲಕ ಸರಕಾರಗಳ ಮೇಲೆ ಒತ್ತಡ ಹೇರಿ, ಕಲಬುರಗಿ ಬಂದ್ ಆಚರಣೆ ಮಾಡಿದವು.

ಪ್ರತಿಭಟನಾಕಾರರು ತೀವ್ರ ಬೆಳೆ ಹಾನಿಯಿಂದ ನೊಂದಿರುವ ರೈತರಿಗೆ ತಕ್ಷಣದ ಪರಿಹಾರವಾಗಿ ಎಕರೆಗೆ 25 ಸಾವಿರ ನೀಡಬೇಕು ಎಂದು ಆಗ್ರಹಿಸಿದರು. ಜತೆಗೆ, ಮುಂಬರುವ ಹಿಂಗಾರು ಬೆಳೆ ಬಿತ್ತನೆಗಾಗಿ ಅಗತ್ಯವಿರುವ ಬೀಜ ಮತ್ತು ರಸಗೊಬ್ಬರ ಉಚಿತವಾಗಿ ಒದಗಿಸಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ನೆರೆ ಹಾವಳಿಯಿಂದ ಮುಳುಗಡೆಯಾದ ಪ್ರದೇಶಗಳಿಗೆ ಶಾಶ್ವತ ಪರಿಹಾರ ಒದಗಿಸಬೇಕು. ಎನ್.ಡಿ.ಆರ್.ಎಫ್ ಮಾರ್ಗಸೂಚಿ ಬದಲಾಯಿಸಬೇಕು ಎಂದು ಒತ್ತಾಯಿಸಿದರು.

ಸಮಿತಿಯ ಮುಖಂಡರಾದ ದಯಾನಂದ ಪಾಟೀಲ್, ಶರಣಬಸಪ್ಪ ಮಮಶೆಟ್ಟಿ, ಮೌಲಮುಲ್ಲಾ, ಜಗದೇವಿ ಹೆಗಡೆ, ಮಂಜುಳ ಭಜಂತ್ರಿ, ನಾಗೇಂದ್ರಪ್ಪ ಥಂಬೆ, ಕರೆಪ್ಪಾ ಕರಗೊಂಡ, ಸಿದ್ದು ಎಸ್. ಎಲ್ ಮಹಾಂತಗೌಡ ನಂದಿಹಳ್ಳಿ, ಲ್ ಮಲ್ಲನಗೌಡ ಪಾಟೀಲ್, ದೀಲಿಪ್ ಪಾಟೀಲ್, ಶರಣು ಸೇರಿ ಅನೇಕರು ಭಾಗಿಯಾಗಿದ್ದರು.

ಎಲ್ಲೆಲ್ಲಿ ರಸ್ತೆ ತಡೆ.?

ರಸ್ತೆ ತಡೆ ನಡೆಸಿದ ಪ್ರಮುಖ ಸ್ಥಳಗಳು:

* ಕೇಂದ್ರ ಬಸ್ ನಿಲ್ದಾಣ

* ಆಳಂದ ಚೆಕ್ ಪೋಸ್ಟ್

* ರಾಮಮಂದಿರ ಸರ್ಕಲ್ (ಜೇವರ್ಗಿ ರಸ್ತೆ)

* ಸೇಡಂ ರಿಂಗ್ ರೋಡ್

* ಹುಮನಾಬಾದ್ ರಿಂಗ್ ರೋಡ್

* ಹೀರಾಪುರ ಕ್ರಾಸ್

* ಹೈಕೋರ್ಟ್ ರಸ್ತೆಯ ಪಕ್ಕದ ಅಫಜಲಪುರ ರಿಂಗ್ ರೋಡ್

* ಶಹಾಬಾದ್ ರಿಂಗ್ ರೋಡ್ ಸಮೀಪ

ಬೆಂಬಲ ನೀಡಿದವರು ಯಾರ್ಯಾರು.?

ಈ ಬಂದ್‌ಗೆ ಕೆಕೆಸಿಸಿಐ, ವೈನ್ ಶಾಪ್ ಮಾಲೀಕರು, ಹಮಾಲಾರ ಸಂಘ, ಪೆಟ್ರೋಲ್ ಬಂಕ್ ಮಾಲೀಕರು, ಕಿರಾಣಿ ವ್ಯಾಪಾರಸ್ಥರು, ಅಡತ ಮಾಲೀಕರ ಸಂಘ, ಕಪಾಡ ಬಾಜಾರ್ ಮಾಲೀಕರ ಸಂಘ, ಬೀದಿ ವ್ಯಾಪಾರಿಗಳು,ಲಾರಿ ಮಾಲೀಕರ ಸಂಘ, ದಾಲ್‌ಮಿಲ್ ಸಂಘ, ಆಟೋ ಚಾಲಕರ ಸಂಘ, ಹೋಟೆಲ್ ಮಾಲೀಕರ ಸಂಘ, ಖಾಸಗಿ ಶಾಲೆಗಳು, ರೈತ, ದಲಿತ, ಕನ್ನಡಪರ, ಮಹಿಳಾ ಪರ, ವಿದ್ಯಾರ್ಥಿ ಸಂಘಟನೆಗಳು, ಕಾರ್ಮಿಕ ಪರ ಸಂಘಟನೆಗಳು ಹಾಗೂ ವಿವಿಧ ಕಲ್ಯಾಣ ಕರ್ನಾಟಕ ಹೋರಾಟ ಸಂಘಟನೆಗಳು ವ್ಯಾಪಕ ಬೆಂಬಲ ವ್ಯಕ್ತಪಡಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net