ಭೂ ಸುಧಾರಣೆ ತಿದ್ದುಪಡಿ ಕಾಯ್ದೆಗೆ ವಿರೋಧ ; ಗೆಜೆಟ್ ಪ್ರತಿಗಳನ್ನು ಸುಟ್ಟು ರೈತ ಪ್ರತಿಭಟನೆ

21TMK_Raitha_Protest 1
Published on

ತುಮಕೂರು: ಕರ್ನಾಟಕ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯುವಂತೆ ಒತ್ತಾಯಿಸಿ ರೈತ ಸಂಘದ ಮುಖಂಡರು ಗೆಜೆಟ್ ಪ್ರತಿಗಳನ್ನು ಸುಟ್ಟು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿದರು.

ಅಲ್ಲದೇ ನೂರಾರು ರೈತ ಮುಖಂಡರು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು. ರಾಜ್ಯ ಕಾರ್ಯದರ್ಶಿ ಕೆಂಕೆರೆ ಸತೀಶ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ರೈತ ವಿರೋಧಿ ನೀತಿಗಳನ್ನು ಖಂಡಿಸಬೇಕಿದೆ, ಸರ್ಕಾರಗಳಿಗೆ ರೈತರ ಶಕ್ತಿಯನ್ನು ತೋರಿಸಲು ಹೋರಾಟ ಅನಿವಾರ್ಯವಾಗಿದೆ ಎಂದರು. ಜನಾಭಿಪ್ರಾಯ ಪಡೆದು ರೂಪುಗೊಂಡ ನಂತರ ಕಾಯ್ದೆಯಾಗಿ ಜಾರಿಯಾಗಬೇಕು ಆದರೆ, ರಾಜ್ಯದಲ್ಲಿ ಕೋವಿಡ್19 ನಂತರದ ಸಂದರ್ಭವನ್ನು ದುಬರ್ಳಕೆ ವಾಡಿಕೊಂಡು ರೈತ ವಿರೋಧಿಯಾಗಿರುವ ಐದು ಕಾಯ್ದೆಗಳು ಸುಗ್ರಿವಾಜ್ಞೆ ಮೂಲಕ ಜಾರಿಯಾಗಿವೆ ಎಂದು ಆಕ್ರೋಶ ಹೊರಹಾಕಿದರು.

ಉದ್ದಿಮೆದಾರರು, ಬಂಡವಾಳಗಾರರ ಕಾಲಡಿಗೆ ರೈತರನ್ನು ತಳ್ಳಲು ಹುನ್ನಾರವನ್ನು ಸರ್ಕಾರ ಮಾಡಿದೆ, ಇದನ್ನು ವಿರೋಧಿಸಿ ರಾಜ್ಯಾದ್ಯಂತ ರೈತರು ಗೆಜೆಟ್ ಪ್ರತಿ ಸುಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ.  ಕಾಯ್ದೆ ವಾಪಸ್ ಪಡೆಯದಿದ್ದರೆ ಹೋರಾಟ ಉಗ್ರ ಸ್ವರೂಪ ಪಡೆಯಲಿದೆ ಎಂದು ಎಚ್ಚರಿಸಿದರು. ಜಿಲ್ಲಾಧ್ಯಕ್ಷ ಆನಂದ ಪಟೇಲ್ ಮಾತನಾಡಿ, ನವಲಗುಂದ, ನರಗುಂದ ಬಂಡಾಯ ಚಳವಳಿ ಆರಂಭವಾಗಿ 40 ವರ್ಷ ಕಳೆಯುತ್ತಾ ಬಂದಿದ್ದರೂ ರಾಜ್ಯದಲ್ಲಿ ಇಂದಿಗೂ ರೈತವಿರೋಧಿ ಕಾನೂನುಗಳಿಗೆ ಬರವಿಲ್ಲದಂತಾಗಿದೆ ಎಂದರು.

ಎಪಿಎಂಸಿ ಕಾಯ್ದೆ ತಿದ್ದುಪಡಿ, ಬೀಜ ಮಸೂದೆಯಂತಹ ರೈತ ಮತ್ತು ಜನವಿರೋಧಿ ಕಾನೂನುಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಜಾರಿಗೆ ತರುವ ಮೂಲಕ ರೈತರಿಗೆ ಮರಣ ಶಾಸನ ಬರೆಯಲು ಹೊರಟಿದೆ. ಇದರಿಂದ ತಮಗಿರುವ ಅತ್ಯಲ್ಪ ಭೂಮಿಯಲ್ಲಿಯೇ ಸ್ವಾಭಿವಾನದಿಂದ ಬದುಕು ನಡೆಸುತ್ತಿದ್ದ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದರು.

ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂದ ಉಪಾಧ್ಯಕ್ಷ ಆರಾಧ್ಯ, ವಿವಿಧ ತಾಲೂಕುಗಳ ಅಧ್ಯಕ್ಷರಾದ ದ್ಯಾಮೇಗೌಡ, ಬಸವಣ್ಣ, ಲಕ್ಕಣ್ಣ, ನಾಗೇಶ್, ಸತೀಶ್ ಹುಳಿಯಾರು, ಕೊರಟಗೆರೆ ಸಿದ್ದರಾಜು, ಅನಿಲ್‌ಕುವಾರ್, ಎಳೆಯಪ್ಪ, ಪುಟ್ಟರಾಜು ಮತ್ತಿತರರು ನೇತೃತ್ವ ವಹಿಸಿದ್ದರು.

ಪ್ರಜಾಪ್ರಭುತ್ವಕ್ಕೆ ಮಾರಕವಾಗಿ ಸುಗ್ರಿವಾಜ್ಞೆಗಳ ಮೂಲಕ ಕಾನೂನು ಜಾರಿಯಾಗುತ್ತಿವೆ, ಹಣವಂತರು ಕೃಷಿ ಭೂಮಿ ಕೊಂಡುಕೊಳ್ಳಲು ಅವಕಾಶ ನೀಡಿದ್ದು ಸಣ್ಣ ರೈತರು ವಿನಾಶವಾಗಲಿದ್ದಾರೆ. ನೈಜ ರೈತರು ಕಣ್ಮರೆಯಾಗಿ ಶ್ರೀಮಂತರ ಬಳಿ ಜೀತ ಮಾಡಬೇಕಾಗುತ್ತದೆ. ಕೆಂಕೆರೆ ಸತೀಶ್ ರಾಜ್ಯ ರೈತ ಸಂಘದ ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net