

ಮೈಸೂರು: ದೆಹಲಿ-ರಾಜಸ್ಥಾನ ಗಡಿಯಲ್ಲಿ ಪ್ರತಿಭಟನಾನಿರತ ರೈತರ ಮೇಲಿನ ಪೊಲೀಸರ ದೌರ್ಜನ್ಯ ಖಂಡಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಯಿತು.
ನಗರದ ನಂಜನಗೂಡು ರಸ್ತೆಯ ಎಪಿಎಂಸಿ ಜಂಕ್ಷನ್ ಬಳಿ ಜಮಾವಣೆಗೊಂಡ ಪ್ರತಿಭಟನಾಕಾರರು ವಾಹನಗಳ ಸಂಚಾರ ತಡೆದರು. ಕೇಂದ್ರ ಸರ್ಕಾರದ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶವ್ಯಕ್ತಪಡಿಸಿದರು.
ಪ್ರತಿಭಟನೆಯಿಂದ ಕೆಲಕಾಲ ಸಂಚಾರ ವ್ಯತ್ಯಯ ಉಂಟಾಯಿತು. ಪೊಲೀಸರು ಮನವೊಲಿಸಲು ಯತ್ನಿಸಿದರೂ ಪ್ರತಿಭಟನಾಕಾರರು ಜಗ್ಗಲಿಲ್ಲ. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಕರೆದೊಯ್ದು ನಂತರ ಬಿಡುಗಡೆ ಮಾಡಿದರು.
ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ದೇವರಾಜ್ ಮಾತನಾಡಿ, ದೇಶದ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಎಂ.ಎಸ್. ಸ್ವಾಮಿನಾಥನ್ ವರದಿ ಪ್ರಕಾರ ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಮಾನ್ಯತೆ ನೀಡಬೇಕು ಎಂದು ಸಂಯುಕ್ತ ಕಿಸಾನ್ ಮೋರ್ಚಾ ಕರೆಕೊಟ್ಟಿರುವ ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ ರೈತರನ್ನು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಬಂಧಿಸಲಾಗಿದೆ. ಇದು ಖಂಡನೀಯ. ರೈತರು ಉಗ್ರಗಾಮಿಗಳೇ ಎಂದು ಪ್ರಶ್ನಿಸಿದರು.
ರೈತರ ಕಷ್ಟಗಳಿಗೆ ಸ್ಪಂದಿಸುವುದು ಸರ್ಕಾರದ ಕರ್ತವ್ಯ. ಆದರೆ, ಕೇಂದ್ರ ಸರ್ಕಾರ ರೈತರು ಸಂಕಷ್ಟದಲ್ಲಿದ್ದರೂ ಸ್ಪಂದಿಸುತ್ತಿಲ್ಲ. ಬೇಡಿಕೆ ಈಡೇರಿಸದೆ ನಿರ್ಲಕ್ಷ್ಯ ಮಾಡುತ್ತಿದೆ. ಕೂಡಲೇ ರೈತರ ಎಲ್ಲ ಸಮಸ್ಯೆ ಪರಿಹಾರ ಮಾಡಬೇಕು. ಬಂಧಿಸಿರುವ ರೈತರನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ರೈತ ಮುಖಂಡರಾದ ಕಿರಗಸೂರು ಶಂಕರ್, ಪರಶಿವಮೂರ್ತಿ, ಲಕ್ಷ್ಮೀಪುರ ವೆಂಕಟೇಶ್, ಸಾತಗಳ್ಳಿ ಬಸವರಾಜು, ವರಕೂಡು ನಾಗೇಶ್, ವಾಜಮಂಗಲ ಮಾದೇವು, ಜಯರಾಮ್, ಸುನಿಲ್‌ಕುಮಾರ್, ಬನ್ನೂರು ಸೂರಿ ಇತರರು ಭಾಗವಹಿಸಿದ್ದರು.