

ಮೈಸೂರು: ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ರಾಜ ರೈತ ಸಂಘಟನೆಗಳ ಒಕ್ಕೂಟ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ದೇಶದ ರೈತರ ಹಿತ ಕಾಯಲು ಎಂಎಸ್‌ಪಿ ಗ್ಯಾರಂಟಿ ಖಾತ್ರಿ ಕಾನೂನು ಜಾರಿಗೊಳಿಸಬೇಕು, ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು, ಡಾ.ಎಂ.ಎಸ್. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೊಳಿಸಬೇಕು, 60 ವರ್ಷ ತುಂಬಿದ ರೈತರಿಗೆ ಪಿಂಚಣಿ ಯೋಜನೆ ಜಾರಿಗೆ ತರಬೇಕು, ಕಬ್ಬಿನ ಎಫ್‌ಆರ್‌ಪಿ ದರ ರೈತರ ಹೊಲದಲ್ಲಿನ ದರ ಎಂದು ನಿಗದಿ ಮಾಡಬೇಕು, ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ಕೈ ಬಿಡಬೇಕು, ಕೃಷಿ ಸಾಲ ನೀತಿಯಲ್ಲಿ ಬದಲಾವಣೆ ತರಬೇಕು, ಪ್ರಧಾನಮಂತ್ರಿ ಫಸಲ್ ಭೀಮಾ ಬೆಳೆ ವಿಮೆಯ ನಿಮಯಗಳಲ್ಲಿ ಬದಲಾವಣೆ ತರಬೇಕು ಎಂದು ಆಗ್ರಹಿಸಲಾಯಿತು. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಅತ್ತಹಳ್ಳಿ ದೇವರಾಜ್, ಕುರುಬೂರು ಸಿದ್ದೇಶ್, ಬೆನಕನಹಳ್ಳಿ ಪರಶಿವಮೂರ್ತಿ, ಕಿರಗಸೂರು ಪ್ರಸಾದ್ ಹಾಗೂ ಇತರರು ಪಾಲ್ಗೊಂಡಿದ್ದರು.