ನಾಲೆಗಳ ಮೂಲಕ ನೀರು ಹರಿಸಲು ಆಗ್ರಹಿಸಿ ರೈತರಿಂದ ಮೈಸೂರಿನಲ್ಲಿ ಪ್ರತಿಭಟನೆ

protest
Published on

ಮೈಸೂರು: ಕಾವೇರಿ, ಕಬಿನಿ ಅಚ್ಚುಕಟ್ಟು ಭಾಗದ ನಾಲೆಗಳಿಗೆ ನೀರು ಹರಿಸಿ ಕೆರೆ ಕಟ್ಟೆಗಳನ್ನು ತುಂಬಿಸಬೇಕು ಎಂದು ಆಗ್ರಹಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ರೈತರು ಕಾಡಾ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ರೈತರು ಕಾಡಾ ಕಚೇರಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ಯತ್ನಿಸಿದರು. ಈ ವೇಳೆ ಪ್ರತಿಭಟನಾನಿರತ ರೈತರನ್ನು ಪೋಲಿಸರು ಪ್ರವೇಶ ದ್ವಾರದ ಬಳಿ ತಡೆದಾಗ ರೈತರು ಹಾಗೂ ಪೋಲಿಸರ ನಡುವೆ ಮಾತಿನ ಚಕಮಕಿ ನಡೆಯಿತು. ಕಾಡಾ ಕಚೇರಿ ಒಳಗೆ ಪ್ರವೇಶಿಸಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಕಾಡಾ ಕಚೇರಿಯ ಹೊರ ಭಾಗದಲ್ಲಿ ರೈತರು ಪ್ರತಿಭಟನೆ ನಡೆಸಿದರು.

ಕಾವೇರಿ-ಕಬಿನಿ ಅಚ್ಚುಕಟ್ಟು ಭಾಗದಲ್ಲಿ ಬೆಳೆದು ನಿಂತಿರುವ ಕಬ್ಬು, ಅಡಿಕೆ, ತೆಂಗು, ಬಾಳೆ ಇನ್ನಿತರೆ ಬೆಳೆಗಳು ಬಿಸಿಲಿನ ತಾಪಕ್ಕೆ ಒಣಗಿ ಹಾಳಾಗುತ್ತಿವೆ. ಕಾವೇರಿ-ಕಬಿನಿ ಅಚ್ಚುಕಟ್ಟು ಪ್ರದೇಶದ ಕೆರೆ ಕಟ್ಟೆಗಳು ಬರಿದಾಗುತ್ತಿದ್ದು ಜನ ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗುತ್ತಿದೆ. ಕೃಷಿ ಪಂಪ್‌ಸೆಟ್‌ಗಳಿಗೆ ಅಂತರ್ಜಲ ಕುಸಿದಿದ್ದು ನೀರಿಲ್ಲದೆ ತೋಟದ ಬೆಳೆಗಳಾದ ಹಣ್ಣು ತರಕಾರಿ ಇನ್ನಿತರೆ ಬೆಳೆಗಳು ಬಿಸಿಲಿನ ತಾಪಕ್ಕೆ ಒಣಗುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಹಾಗಾಗಿ ಕೂಡಲೇ ಜಲಾಶಯದಿಂದ ನಾಲೆಗಳ ಮೂಲಕ ನೀರು ಹರಿಸಬೇಕು ಎಂದು ಆಗ್ರಹಿಸಲಾಯಿತು.

ಕೆಆರ್‌ಎಸ್ ವಿಭಾಗದ ನಂ.4 ಉಪ ವಿಭಾಗಕ್ಕೆ ಸೇರಿದ ಬನ್ನೂರು ದೊಡ್ಡ ಕೆರೆ ಬಲದಂಡೆ ನಾಲೆ, ಎಡದಂಡೆ ನಾಲೆಗಳನ್ನು ಆಧುನೀಕರಣ ಮಾಡುವುದಾಗಿ ಕುಂಟು ನೆಪ ಹೇಳಿಕೊಂಡು ಬರುತ್ತಿರುವುದು ಸರಿಯಲ್ಲ. ಈ ಬಾರಿ ಕಾಮಗಾರಿ ಪ್ರಾರಂಭ ಮಾಡಿ ಪೂರ್ಣ ಗೊಳಿಸಬೇಕು ಎಂದು ಒತ್ತಾಯಿಸಲಾಯಿತು. ಪ್ರತಿಭಟನೆಯ ಬಳಿಕ ಕಾಡಾ ಕಚೇರಿಯ ಡೆಪ್ಯೂಟಿ ಇಂಜಿನಿಯರ್ ಗೌತಮ್ ಅವರಿಗೆ ಮನವಿ ಪತ್ರ ನೀಡಲಾಯಿತು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಅತ್ತಹಳ್ಳಿ ದೇವರಾಜು, ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಲಕ್ಷ್ಮೀಪುರ ವೆಂಕಟೇಶ್, ಮಾರ್ಬಳ್ಳಿ ನೀಲಕಂಠಪ್ಪ, ಸತೀಶ್ ಕೇರ್ಗಳ್ಳಿ, ಶಿವಕುಮಾರ್ ಕೆರ್ಗಳ್ಳಿ, ಧನಗಳ್ಳಿ ಕೆಂಡಗಣ್ಣಸ್ವಾಮಿ, ಜಯರಾಮ ವರಕೋಡು, ವರಕೋಡು ನಾಗೇಶ್, ಕೆಂಪೇಗೌಡನ ಕೊಪ್ಪಲು ಕೆ.ಶಿವಶಂಕರ, ಕೆ.ಸಿ.ನಾಗರಾಜು ಕೊಳ್ಳೇಗೌಡ ಕುಂತನಹಳ್ಳಿ, ಪಿ.ನಾಗೇಂದ್ರ, ವಾಜಮಂಗಲ, ಮಾದೇವ, ಮಹಾಲಿಂಗ, ಬಸವರಾಜು ಸಾತಗಳ್ಳಿ, ಮಾರ್ಬಳ್ಳಿ ಬಸವರಾಜ್ ಹಾಗೂ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net