

ಮೈಸೂರು: ಎನ್‌ಡಿಆರ್‌ಎಫ್ ಮಾನದಂಡಕ್ಕೆ ತಿದ್ದುಪಡಿ ತಂದು ಅತಿವೃಷ್ಟಿ, ಅನಾವೃಷ್ಟಿ ಹಾಗೂ ಪ್ರಕೃತಿ ವಿಕೋಪ ಸಂದರ್ಭ ಉಂಟಾಗುವ ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದಿಂದ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಶಾಸಕರು, ಸಂಸದರು, ಸಚಿವರು ಪ್ರತಿ ವರ್ಷ ಸಂಬಳ ಹೆಚ್ಚಳ ಮಾಡಿಕೊಳ್ಳುತ್ತಾರೆ. ಸರ್ಕಾರಿ ನೌಕರರಿಗೆ ಪ್ರತಿ ವರ್ಷ ಸಂಬಳ ಏರಿಕೆ ಮಾಡುತ್ತಾರೆ. ಆದರೆ ರೈತರ ಬೆಳೆ ನಷ್ಟ ಪರಿಹಾರ ಮಾನದಂಡವನ್ನು ಎಂಟು ವರ್ಷವಾದರೂ ಏರಿಕೆ ಮಾಡಿಲ್ಲ. ಪ್ರಸಕ್ತ ಇರುವ ಪರಿಹಾರ ಅವೈಜ್ಞಾನಿಕವಾಗಿದೆ. ಮಳೆ ಆಶ್ರಯದ ಬೆಳೆ ನಷ್ಟಕ್ಕೆ ಎಕರೆಗೆ ಕನಿಷ್ಠ 25,000, ನೀರಾವರಿ ತೋಟಗಾರಿಕೆ ಬೆಳೆಗಳಿಗೆ ಎಕರೆಗೆ ಕನಿಷ್ಠ 40,000, ವಾಣಿಜ್ಯ ಬೆಳೆಗಳಿಗೆ ಎಕರೆಗೆ 60,000 ಗಳಿಗೆ ಏರಿಕೆ ಮಾಡಬೇಕು ಎಂದು ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದರು.
ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕದಲ್ಲಿ ಮಳೆ ಹಾಗೂ ಪ್ರವಾಹದಿಂದ ದೊಡ್ಡ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಕೇಂದ್ರ ಸರ್ಕಾರ ಪಂಜಾಬ್ ರಾಜ್ಯದ ರೈತರಿಗೆ ಬೆಳೆಹಾನಿಗೆ ವಿಶೇಷ ಪ್ಯಾಕೇಜ್ ನೀಡಿದ ರೀತಿಯಲ್ಲಿಯೇ ರಾಜ್ಯದ ರೈತರಿಗೂ ನೀಡಬೇಕು. ರಾಜ್ಯಕ್ಕೆ 5000 ಕೋಟಿ ರೂ. ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಒತ್ತಾಯಿಸಿದರು.
ಹಿಂದಿನ ವರ್ಷದ ಸಕ್ಕರೆ ಕಾರ್ಖಾನೆಗಳ ಉಪ ಉತ್ಪನ್ನಗಳ ಲಾಭ ಹಂಚಿಕೆ ರೈತರಿಗೆ ಕೂಡಲೇ ಕೊಡಿಸಬೇಕು. ಕಬ್ಬು ಬೆಳೆಯಲು ಒಂದು ಟನ್‌ಗೆ 3700 ರೂ. ವೆಚ್ಚವಾಗುತ್ತದೆ ಎಂದು ಕೇಂದ್ರ ಕೃಷಿ ಬೆಲೆ ಆಯೋಗಕ್ಕೆ ಕೃಷಿ ಇಲಾಖೆ ವರದಿ ನೀಡಿದೆ. ಇದನ್ನು ಅರಿತು ರಾಜ್ಯ ಸರ್ಕಾರ ಕಬ್ಬಿಗೆ ಹೆಚ್ಚುವರಿ ರಾಜ್ಯ ಸಲಹಾ ಬೆಲೆ ನಿಗದಿ ಮಾಡಬೇಕು. ಕಳೆದ ಎರಡು ವರ್ಷಗಳ ಹಿಂದೆ ರಾಜ್ಯ ಸರ್ಕಾರ ಘೋಷಣೆ ಮಾಡಿದ ಟನ್ ಕಬ್ಬಿಗೆ 150 ರೂ.ಹೆಚ್ಚುವರಿ ಹಣವನ್ನು ಸರ್ಕಾರವೇ ಕಾರ್ಖಾನೆಗಳಿಂದ ರೈತರಿಗೆ ಕೊಡಿಸಲಿ. ಭತ್ತದ ಕನಿಷ್ಠ ಬೆಂಬಲ ಬೆಲೆ 2369 ರೂ.ಗೆ ಪ್ರೋತ್ಸಾಹ ಧನ 500 ರೂ. (ಪ್ರತಿ ಕ್ವಿಂಟಾಲ್ಗೆ) ಸೇರಿಸಿ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಸೋಮಶೇಖರ್, ವರಕೋಡು ನಾಗೇಶ್, ಮಾರ್ಬಳ್ಳಿ ನೀಲಕಂಠಪ್ಪ, ಲಕ್ಷ್ಮೀಪುರ ವೆಂಕಟೇಶ್, ದೇವನೂರು ವಿಜಯೇಂದ್ರ, ಹಂಪಾಪುರ ರಾಜೇಶ್, ದೇವನೂರು ಮಹದೇವಪ್ಪ, ಕುರುಬೂರು ಪ್ರದೀಪ್, ರಂಗರಾಜ, ಕಾಟೂರು ಮಹದೇವಸ್ವಾಮಿ, ಕಾಟೂರು ನಾಗೇಶ್, ಅಂಬಳೆ ಮಂಜುನಾಥ್ ಹಾಗೂ ಇತರರು ಪಾಲ್ಗೊಂಡಿದ್ದರು.