ರೈತ ಮುಖಂಡ ಜಗಜಿತ್ ಬಂಧನ ಖಂಡಿಸಿ ಮೈಸೂರಿನಲ್ಲಿ ರೈತರಿಂದ ಪ್ರತಿಭಟನೆ

10A
Published on

ಮೈಸೂರು: ರೈತ ಮುಖಂಡ ಜಗಜಿತ್ ಸಿಂಗ್ ದಲೆವಾಲ ಅವರನ್ನು ಬಂಧಿಸಿರುವ ಕ್ರಮ ಖಂಡಿಸಿ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಯಿತು.

ದೆಹಲಿ ಗಡಿಯಲ್ಲಿ ಉಪವಾಸದ ಮೂಲಕ ಹೋರಾಟ ನಡೆಸುತ್ತಿದ್ದ ರೈತ ಮುಖಂಡ ಜಗಜಿತ್ ಸಿಂಗ್ ದಲೆವಾಲಾ ಅವರನ್ನು ಪೊಲೀಸರ ಮಧ್ಯರಾತ್ರಿ ಸರ್ಪಗಾವಲಿನಲ್ಲಿ ಸುತ್ತುವರಿದು ಬಂಧಿಸಿದ್ದಾರೆ. ಇದು ಹೋರಾಟ ಹತ್ತಿಕ್ಕುವ ಸರ್ಕಾರದ ದಬ್ಬಾಳಿಕೆ ವರ್ತನೆ ಎಂದು ಪ್ರತಿಭಟನಾಕಾರರು ದೂರಿದರು.

ಕೃಷಿ ಉತ್ಪನ್ನಗಳಿಗೆ ಎಂಎಸ್‌ಪಿ ಕಾನೂನು ಖಾತ್ರಿ ಕಾಯ್ದೆ ಜಾರಿ ಮಾಡದೆ ಮುಖಂಡರನ್ನು ಬಂಧಿಸಿರುವುದು ಸರಿಯಲ್ಲ. ಅಂಬಾನಿ, ಅದಾನಿ ಸೇರಿದಂತೆ ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಸರ್ಕಾರ, ರೈತರು ಬೆಳೆದ ದವಸ ಧಾನ್ಯಗಳನ್ನು ಬೇರೆ ದೇಶಗಳಿಗೆ ಕೊಡುತ್ತಾರೆ. ಆದರೆ ಕನಿಷ್ಠ ಬೆಂಬಲ ಬೆಲೆ ನೀಡುವುದಿಲ್ಲ ಎಂದು ಕಿಡಿಕಾರಿದರು.

ಪ್ರಧಾನಿ ನರೇಂದ್ರ ಮೋದಿ ಚುನಾವಣೆ ಸಮಯದಲ್ಲಿ ರೈತರ ಸಮಸ್ಯೆಗಳನ್ನು ಬಗೆಹರಿಸುತ್ತೇನೆ, ಬೆಳೆಗಳಿಗೆ ಎಂಎಸ್‌ಪಿ, ಸ್ವಾಮಿನಾಥನ್ ವರದಿ ಅನುಷ್ಠಾನ ಸೇರಿದಂತೆ ಎಲ್ಲವನ್ನೂ ಈಡೇರಿಸುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ ಚುನಾವಣಾ ಭಾಷಣಗಳಲ್ಲಿ ಮತ ಪಡೆಯುವುದಕ್ಕೆ ಸುಳ್ಳು ಭಾಷಣ ಮಾಡುತ್ತಾರೆ. ಅಧಿಕಾರಕ್ಕೆ ಬಂದ ನಂತರ ಯಾವ ಕಾಯ್ದೆಯನ್ನೂ ಜಾರಿಗೆ ತರುವುದಿಲ್ಲ. ಈ ರೀತಿ ಮೋಸ ಮಾಡುವುದನ್ನು ಬಿಟ್ಟು ನುಡಿದಂತೆ ನಡೆಯಿರಿ ಎಂದು ಒತ್ತಾಯಿಸಿದರು.

ಕೂಡಲೇ ಎಂಎಸ್‌ಪಿ ಕಾಯ್ದೆ ಜಾರಿ ಮಾಡಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಆಗಬೇಕು. ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜು, ಜಿಲ್ಲಾ ಕಾರ್ಯಾಧ್ಯಕ್ಷ ಕಿರಗಸೂರ್ ಶಂಕರ್ ಮುಖಂಡರಾದ ಸೋಮಶೇಖರ್, ರೂಪಾ, ಮಾರ್ಬಳ್ಳಿ ನೀಲಕಂಠಪ್ಪ, ಲಕ್ಷ್ಮೀಪುರ ವೆಂಕಟೇಶ್, ಕುರುಬೂರು ಸಿದ್ದೇಶ್, ಸಾತಗಳ್ಳಿ ಬಸವರಾಜ್, ವರಕೂಡು ನಾಗೇಶ್, ಕಾಟೂರು ಮಹದೇವಸ್ವಾಮಿ, ನಾಗೇಶ್, ಕಿರಗಸೂರು ಪ್ರಸಾದ ನಾಯಕ್, ಪರಶಿವಮೂರ್ತಿ, ಗೌರಿಶಂಕರ್, ಕೋಟೆ ಸುನೀಲ್, ವಾಜಮಂಗಲ ಮಹದೇವ ನಾಯಕ್, ಕುರುಬೂರು ಗುರುಸ್ವಾಮಿ, ಆದಿಬೆಟ್ಟಹಳ್ಳಿ ರವಿ, ಕುಮಾರ್, ರಾಜೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net