ಭತ್ತ ಖರೀದಿಯ ನಿಯಮಾವಳಿ ಬದಲಾವಣೆ: ರೈತರಿಂದ ಮೈಸೂರಿನಲ್ಲಿ ಪ್ರತಿಭಟನೆ

Raitha Sangha Protest
Published on

ಮೈಸೂರು: ಈ ಬಾರಿ ಎಂಎಸ್‌ಪಿ ಯೋಜನೆಯಡಿ ಭತ್ತ ಖರೀದಿ ನಿಯಮದಲ್ಲಿ ಮಾಡಿರುವ ಬದಲಾವಣೆಯನ್ನು ವಿರೋಧಿಸಿ ಭಾರತೀಯ ರೈತರು ಮತ್ತು ಕೃಷಿ ಕಾರ್ಮಿಕರ ಜಾಗೃತಿ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಯಿತು.

ರೈತರ ಅನುಕೂಲಕೋಸ್ಕರ 2018ರಲ್ಲಿ ರಾಜ್ಯ ಸರ್ಕಾರ ರೈತರ ಜಮೀನಿಗೆ ಹತ್ತಿರವಿರುವ ಮಿಲ್‌ಗಳಲ್ಲಿ ಭತ್ತವನ್ನು ಶೇಖರಣೆ ಮಾಡುವ ಅವಕಾಶ ನೀಡಿತ್ತು. ಆದರೆ, ಇದೀಗ ಈ ವ್ಯವಸ್ಥೆಯನ್ನು ಕೈಬಿಟ್ಟಿರುವುದರಿಂದ ರೈತರಿಗೆ ಸಾಕಷ್ಟು ಅನಾನುಕೂಲವಾಗಲಿದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.

ರೈತರು ತಮ್ಮ ಜಮೀನಿನಲ್ಲಿ ಬೆಳೆದಿರುವ ಭತವನ್ನು ಕಟಾವು ಮಾಡಿದ ನಂತರ ಸಂಬಂಧಪಟ್ಟ ಖರೀದಿ ಅಧಿಕಾರಿಗಳು ದಿನಾಂಕ ಗೊತ್ತುಪಡಿಸುವ ತನಕ ರೈತರು ದಾಸ್ತಾನನ್ನು ಒಂದು ಕಡೆ ಶೇಖರಣೆ ಮಾಡಿಕೊಂಡು ಕಾಯುವ ಪರಿಸ್ಥಿತಿ ಇದೆ. ಹಣಕಾಸಿನ ಮುಗ್ಗಟ್ಟಿನಲ್ಲಿರುವ ರೈತರು ಭತ್ತವನ್ನು ದಾಸ್ತಾನು ಮಾಡಲು ಸಾಧ್ಯವಾಗದೆ ಸ್ಥಳೀಯವಾಗಿ ಕಡಿಮೆ ದರಕ್ಕೆ ಭತ್ತವನ್ನು ಮಾರಾಟ ಮಾಡುವ ಆತಂಕ ಇದ್ದು, ಹಾಗಾಗಿ ದಾಸ್ತಾನು ವಿಚಾರದಲ್ಲಿ ಸರ್ಕಾರ ಹಳೆಯ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಲಾಯಿತು.

ಕೇಂದ್ರ ಸರ್ಕಾರ ಭತ್ತಕ್ಕೆ ನಿಗದಿಮಾಡಿರುವ ಎಂಎಸ್‌ಸಿ ಜತೆಗೆ ರಾಜ್ಯ ಸರ್ಕಾರ ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯ ರೈತರಿಗೆ ಮಾತ್ರ ಪ್ರತಿ ಕ್ವಿಂಟಲ್‌ಗೆ 500 ರೂ. ಪ್ರೋತ್ಸಾಹ ಧನ ನೀಡುತ್ತಿದ್ದು, ಇದನ್ನು ರಾಜ್ಯದ ಎಲ್ಲ ಭತ್ತ ಬೆಳೆಗಾರರಿಗೂ ವಿಸ್ತರಿಸಬೇಕು ಎಂದು ಆಗ್ರಹಿಸಲಾಯಿತು.

ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳಾದ ಎಂ.ಎನ್.ವೆಂಕಟೇಶ್, ರಾಮಣ್ಣ, ಮಹದೇವಸ್ವಾಮಿ, ಪ್ರಕಾಶ್, ಕುಪ್ಪೇಗಾಲ ನಾಗೇಂದ್ರ, ಹಳ್ಳಿಕೆರೆಹುಂಡಿ ರವಿ, ಪ್ರಕಾಶ್, ಲಕ್ಷ್ಮೀ ನಾರಾಯಣ ಹಾಗೂ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net