

ಮದ್ದೂರು: ಕನಿಷ್ಠ ಬೆಂಬಲ ಯೋಜನೆಯಡಿ ರೈತರಿಂದ ಖರೀದಿಸಿದ ರಾಗಿಯ ಹಣ ಪಾವತಿಸುವಂತೆ ಒತ್ತಾಯಿಸಿ ತಾಲೂಕಿನ ವಿವಿಧ ಗ್ರಾಮಗಳ ರೈತರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ತಾಲೂಕು ಕಚೇರಿಯ ಮುಂದೆ ಸೋಮವಾರ ಜಮಾಯಿಸಿದ ವಿವಿಧ ಗ್ರಾಮಗಳ ರೈತರು, ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡ ಕೀಳಘಟ್ಟ ನಂಜುಂಡಯ್ಯ ಮಾತನಾಡಿ, ತಾಲೂಕಿನ ನೂರಾರು ರೈತರು ಖರೀದಿ ಕೇಂದ್ರದಲ್ಲಿ ರಾಗಿ ಮಾರಾಟ ಮಾಡಿ ನಾಲ್ಕೈದು ತಿಂಗಳಾದರೂ ಹಣ ಪಾವತಿ ಮಾಡಿಲ್ಲ. ರಾಗಿ ಖರೀದಿ ಹಣ ಅಂದಾಜು 250 ರಿಂದ 300 ಕೋಟಿ ರೂ.ಗಳನ್ನು ಸರ್ಕಾರ ಬಾಕಿ ಉಳಿಸಿಕೊಂಡಿದೆ ಎಂದರು.
ಮುಂಗಾರು ಹಂಗಾಮಿಗೆ ರೈತರು ಬಿತ್ತನೆ ಬೀಜ, ರಸಗೊಬ್ಬರ, ಕೃಷಿ ಚಟುವಟಿಕೆ ಹಾಗೂ ಜೀವನ ನಿರ್ವಹಣೆಗೆ ಸಾಕಷ್ಟು ಕಷ್ಟ ಸಾಧ್ಯವಾಗುತ್ತಿದ್ದು, ಹೀಗಾಗಿ ಆದಷ್ಟು ಬೇಗ ಹಣ ಪಾವತಿ ಮಾಡಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವಾರದೊಳಗೆ ರಾಗಿ ಖರೀದಿ ಹಣ ಪಾವತಿ ಮಾಡಬೇಕು. ಇಲ್ಲದಿದ್ದರೆ ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆದು ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದರು.
ತಹಸೀಲ್ದಾರ್ ಪರಶುರಾಮ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಸೋ.ಶಿ.ಪ್ರಕಾಶ್, ಪ್ರಭುಲಿಂಗ, ವೆಂಕಟೇಶ್, ಮಂಜೇಶ್, ರಾಮೇಗೌಡ, ಉಮೇಶ್, ಗೌಡಯ್ಯ, ರಮೇಶ್, ನಿಂಗೇಗೌಡ, ರಾಜೇಶ್ ಮತ್ತಿತರರು ಇದ್ದರು.