ದೆಹಲಿ ರೈತರ ಹೋರಾಟ ಬೆಂಬಲಿಸಿ ಕೋಲಾರದಲ್ಲಿ ಬೀದಿಗಿಳಿದ ವಿವಿಧ ಸಂಘಟನೆಗಳು

4-klr-1
Published on

ಕೋಲಾರ : ಕೃಷಿ ಸಂಬಂಧಿತ ಮಸೂದೆಗಳನ್ನು ವಾಪಸ್ ಪಡೆಯಲು ಆಗ್ರಹಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ನಗರದ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದ ವೃತ್ತದಲ್ಲಿ ವಿವಿಧ ರೈತ ಸಂಘಟನೆಗಳು ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿ ದಹಿಸಿ ಶುಕ್ರವಾರ ಪ್ರತಿಭಟಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ರೈತ ಸಂಘ ಪ್ರಧಾನ ಕಾರ್ಯದರ್ಶಿ ಅಬ್ಬಣಿ ಶಿವಪ್ಪ, ಕೃಷಿ ಸಂಬಂಧಿ ಸುಗ್ರಿವಾಜ್ಞೆ ವಾಪಸ್ ಪಡೆಯಬೇಕು ಎಂಬುದು ರೈತರ ಬೇಡಿಕೆ. ಪ್ರಧಾನಿ ಮೋದಿ ರೈತರ ಸಮಸ್ಯೆ ಆಲಿಸುವ ಬದಲು ಹಿಟ್ಲರ್ ರೀತಿ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಐಟಿಯು ಜಿಲ್ಲಾ ಗೌರವ ಅಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ, ಕೇಂದ್ರ ಸರ್ಕಾರ ಹೋರಾಟನಿರತ ರೈತರನ್ನು ಮಾತುಕತೆಗೆ ಆಹ್ವಾನಿಸಿ ಷರತ್ತುಗಳನ್ನು ವಿಧಿಸುತ್ತಿದೆ. ಕೃಷಿ ನೀತಿಗಳ ಬಗ್ಗೆ ಮರು ಪರಿಶೀಲನೆ ಮಾಡುವುದಿಲ್ಲ ಎನ್ನುವುದು ಸರ್ಕಾರದ ದ್ವಂದ್ವ ಧೋರಣೆಯಾಗಿದೆ. ಕೇಂದ್ರ ತನ್ನ ಧೋರಣೆ ಬದಲಿಸಿಕೊಳ್ಳದಿದ್ದರೆ ಹೋರಾಟ ತೀವ್ರಗೊಳ್ಳಲಿದೆ. ಬೀದಿಬೀದಿಗಳಲ್ಲೂ ರೈತರು ಚಳವಳಿ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಕೆಪಿಆರ್​ಎಸ್ ತಾಲೂಕು ಅಧ್ಯಕ್ಷ ಎನ್.ಎನ್.ಶ್ರೀರಾಮ್ ಮಾತನಾಡಿ, ಕೇಂದ್ರ ಸರ್ಕಾರ ರೈತರನ್ನು ಉಗ್ರರಂತೆ ಬಿಂಬಿಸುವುದು ಸರಿಯಲ್ಲ. ರೈತರು ಹಕ್ಕುಗಳಿಗಾಗಿ ಬೀದಿಗೆ ಇಳಿದಿದ್ದಾರೆ. ಸರ್ಕಾರ ಮುಕ್ತಮನಸ್ಸಿನಿಂದ ರೈತರ ಜತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.

ರಾಜ್ಯ ರೈತ ಸೇನೆ ಜಿಲ್ಲಾಧ್ಯಕ್ಷ ಗಣೇಶಗೌಡ, ಕೆಪಿಆರ್​ಎಸ್ ಜಿಲ್ಲಾ ಕಾರ್ಯದರ್ಶಿ ಟಿ.ಎಂ ವೆಂಕಟೇಶ್, ವಿ.ನಾರಾಯಣರೆಡ್ಡಿ, ಗಂಗಮ್ಮ, ಆಲಹಳ್ಳಿ ವೆಂಕಟೇಶ್, ಚಿನ್ನಮ್ಮ, ರಮೇಶ್, ರೈತ ಸಂಘದ ತಾಲೂಕು ಅಧ್ಯಕ್ಷ ರಮೇಶ್, ಮುಖಂಡತಾದ ವಾನರಾಶಿ ಗೋಪಾಲ್, ಮಂಜುನಾಥ್, ನಾರಾಯಣಸ್ವಾಮಿ, ವೀರಪ್ಪ, ರೈತ ಸೇನೆ ಮುಖಂಡರಾದ ಮಸೂದ್ ಪಾಷಾ, ಅಮಾನ್, ಮುನಿವೆಂಕಟಪ್ಪ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಕೃಷ್ಣ, ಭೀಮರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net