ಕರೆಂಟ್ ಕಡಿತಕ್ಕೆ ರೈತರ ಆಕ್ರೋಶ

PROTEST
Published on

ಹೊಳೆಆಲೂರ: ಅನಿಯಮಿತವಾಗಿ ವಿದ್ಯುತ್ ಕಡಿತ ಮಾಡುತ್ತಿರುವುದರಿಂದ ಗೋವಿನಜೋಳ, ಕಬ್ಬು. ಉಳ್ಳಾಗಡ್ಡಿ, ಮೆಣಸಿನಕಾಯಿ ಪೈರುಗಳು ಸಂಪೂರ್ಣ ಹಾಳಾಗುವ ಆತಂಕ ಎದುರಾಗಿದ್ದು, ಈ ಮೂದಲಿನಿಂತೆ ಹಗಲಲ್ಲಿ 7 ತಾಸು ತ್ರೀ ಫೇಸ್ ವಿದ್ಯುತ್ ಒದಗಿಸಬೇಕು ಎಂದು ಮೆಣಸಗಿ ಗ್ರಾಮಸ್ಥರು ಹೊಳೆ ಆಲೂರ ಹೆಸ್ಕಾಂ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.

ಮುಂಗಾರು ಮಳೆ ಕೊರತೆಯಿಂದ ಬೆಳೆ ಕಳೆದುಕೊಂಡು ತೀವ್ರ ತೊಂದರೆ ಅನುಭವಿಸಿದ್ದೇವೆ. ಈಗ ಯಾವ ಮುನ್ಸೂಚನೆ ನೀಡದೇ ನಾಲ್ಕೈದು ದಿನಗಳಿಂದ ಹೆಸ್ಕಾಂ ಅಧಿಕಾರಿಗಳು ಏಕಾಏಕಿ ಅನಿಮಿತವಾಗಿ ವಿದ್ಯುತ್ ಕಡಿತ ಮಾಡುತ್ತಿದ್ದಾರೆ. ಇದರಿಂದ ಬೆಣ್ಣೆಹಳ್ಳ ಹಾಗೂ ಮಲಪ್ರಭಾ ನದಿಯ ಆಶ್ರಯದಿಂದ ನೀರಾವರಿ ಮಾಡಿಕೊಂಡು ಗೋವಿನಜೋಳ ಹಾಗೂ ಕಬ್ಬು ಬೆಳೆಯುತ್ತಿರುವ ರೈತರು ಬೆಳೆ ಉಳಿಸಿಕೊಳ್ಳಲು ಸಾಹಸಪಡುವಂತಾಗಿದೆ. ಒಂದು ವಾರ ಬೆಳೆಗೆ ನೀರುಣಿಸದಿದ್ದರೆ ಫಸಲು ಕೈತಪ್ಪುತ್ತವೆ. ಸಮೃದ್ಧವಾಗಿ ಬೆಳೆದ ಬೆಳೆ ಕಣ್ಣೆದುರೇ ಹಾಳಾಗುತ್ತಿವೆ. ಸಮಸ್ಯೆ ಬಗೆಹರಿಸದಿದ್ದರೆ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.

ರೋಣ ಕಾರ್ಯನಿರ್ವಾಹಕ ಇಂಜಿನಿಯರ್ ರವಿಕಿರಣ ಕೆ, ಸಹಾಯಕ ಕಾರ್ಯನಿರ್ವಾಹಕ ಚೇತನ ಹಾದಿಮನಿ, ಶಾಖಾಧಿಕಾರಿ ಯಚ್ಚರಪ್ಪ ದಾಮೋಧರ ಮಾತನಾಡಿ, ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಗಾಳಿ ವಿದ್ಯುತ್ ಪೂರೈಕೆ ತಾತ್ಕಾಲಿಕವಾಗಿ ಸ್ಥಗಿತವಾಗಿದ್ದರಿಂದ ಸಮಸ್ಯೆಯಾಗಿದೆ. ಅ. 12ರಿಂದಲೇ ಆರು ತಾಸು ವಿದ್ಯುತ್ ಪೂರೈಸಲಾಗುತ್ತದೆ ಎಂದು ಭರಸವಸೆ ನೀಡಿದರು.

ಕೇದಾರಗೌಡ ಭರಮಗೌಡ್ರ, ಪ್ರವೀಣ ಕುಲಕರ್ಣಿ, ಪ್ರಭುಗೌಡ ಫಕೀರಗೌಡ್ರ, ನಿಂಗಪ್ಪ ಮುದೇನೂರ, ಬಸನಗೌಡ ಶಿರಗುಂಪಿ, ಮುತ್ತಣ್ಣ ಹೊಸಂಗಡಿ, ಈರಣ್ಣ ಅಂಗಡಿ, ಯಲ್ಲಪ್ಪ ಮಾಯಣ್ಣವರ, ಈಶ್ವರ ಮುದೇನೂರ, ಹೊಳಬಸಪ್ಪ ಹೊಸಂಗಡಿ, ರಾಮಪ್ಪ ಸಕ್ರಿ, ಕರಿಗೌಡ ದೊಡ್ಡಮನಿ, ಮುತ್ತಪ್ಪ ಕಲಾದಗಿ, ನಿಂಗನಗೌಡ ಮಣ್ಣೂರ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪಿಎಸ್‌ಐ ಎಲ್.ಕೆ. ಜೋಲಕಟ್ಟಿ ಹಾಗೂ ಸಿಬ್ಬಂದಿ ಬಂದೂಬಸ್ತ್ ಕೈಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net