ಶಿಗ್ಗಾಂವಿ ಹೆಸ್ಕಾಂ ಕಚೇರಿ ಎದುರು ರೈತರ ಪ್ರತಿಭಟನೆ, ಏಳು ತಾಸು ನಿರಂತರ ವಿದ್ಯುತ್ ಪೂರೈಸಲು ಒತ್ತಾಯ

FARMER PROTEST IN SHIGGAVI
Published on

ಶಿಗ್ಗಾಂವಿ: ಕೃಷಿ ಪಂಪ್​ಸೆಟ್​ಗಳಿಗೆ ಹಗಲಿನಲ್ಲಿ ನಿರಂತರ ಏಳು ತಾಸು ವಿದ್ಯುತ್ ಪೂರೈಕೆ ಮಾಡಬೇಕೆಂದು ಒತ್ತಾಯಿಸಿ ತಾಲೂಕಿನ ರೈತರು ಮತ್ತು ರೈತ ಸಂಘದ ತಾಲೂಕು ಘಟಕದ ಕಾರ್ಯಕರ್ತರು ಪಟ್ಟಣದ ಹೆಸ್ಕಾಂ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ರಾಣಿ ಚನ್ನಮ್ಮ ಸರ್ಕಲ್​ನಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ರೈತರು, ಸರ್ಕಾರದ ವಿರುದ್ಧ ಘೊಷಣೆ ಕೂಗುತ್ತ ಹೆಸ್ಕಾಂ ಕಚೇರಿಗೆ ಆಗಮಿಸಿ, ಸುಮಾರು ನಾಲ್ಕು ತಾಸು ಪ್ರತಿಭಟನೆ ನಡೆಸಿದರು.

ರೈತರು ಬರಗಾಲದಿಂದ ತತ್ತರಿಸಿ ಹೋಗಿದ್ದಾರೆ. ಈ ಮೊದಲು ಕೃಷಿ ಪಂಪ್​ಸೆಟ್​ಗಳಿಗೆ ಏಳು ತಾಸು ವಿದ್ಯುತ್ ಸರಬರಾಜು ಮಾಡಲಾಗುತ್ತಿತ್ತು. ಈಗ ಕಡಿತಗೊಳಿಸಿ ಐದು ತಾಸು ವಿದ್ಯುತ್ ಪೂರೈಸಲಾಗುತ್ತಿದೆ. ಇದರಿಂದ ರೈತರಿಗೆ ನೀರಾವರಿ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಮೊದಲಿನಂತೆ ಹಗಲು ಹೊತ್ತಿನಲ್ಲಿಯೇ ಏಳು ತಾಸು ನಿರಂತರ ವಿದ್ಯುತ್ ಸರಬರಾಜು ಮಾಡಬೇಕು ಎಂದು ಒತ್ತಾಯಿಸಿದರು.

ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹೊಸಮನಿ, ವಿದ್ಯುತ್ ಸಮಸ್ಯೆಯನ್ನು ಮೇಲಧಿಕಾರಿಗಳ ಮೂಲಕ ಸರ್ಕಾರಕ್ಕೆ ತಿಳಿಸಲಾಗುವುದು ಎಂದು ಭರವಸೆ ನೀಡಿದರು. ಇದರಿಂದ ಆಕ್ರೋಶಗೊಂಡ ರೈತರು, ನಮಗೆ ಸೂಕ್ತ ರೀತಿಯಲ್ಲಿ ವಿದ್ಯುತ್ ಸರಬರಾಜು ಮಾಡುವ ಭರವಸೆ ನೀಡುವವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು. ಆಗ ತಹಸೀಲ್ದಾರ್ ಸಂತೋಷ ಹಿರೇಮಠ ಸ್ಥಳಕ್ಕೆ ಆಗಮಿಸಿ, ರೈತರ ಮನವೊಲಿಸಲು ಮುಂದಾದರು. ಆದರೂ, ರೈತರು ಸಮರ್ಪಕ ಉತ್ತರ ಸಿಗದಿದ್ದರಿಂದ ಪ್ರತಿಭಟನೆ ಮುಂದುವರಿಸಿದರು.

ನಂತರ ಸ್ಥಳಕ್ಕೆ ಆಗಮಿಸಿದ ಹೆಸ್ಕಾಂ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ, ಈಗ ಶಿಪ್ಟ್ ಮೂಲಕ ಕೊಡುತ್ತಿರುವ ಐದು ತಾಸುಗಳ ವಿದ್ಯುತ್ ಅನ್ನು ಹಗಲಿನಲ್ಲಿ ನಿರಂತರವಾಗಿ ಪೂರೈಸಲು ಮತ್ತು ತಮ್ಮ ಬೇಡಿಕೆಗೆ ಅನುಸಾರವಾಗಿ ಏಳು ತಾಸು ಪೂರೈಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಶನಿವಾರದೊಳಗಾಗಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ರೈತ ಸಂಘದ ಸಂಘಟನಾ ಕಾರ್ಯದರ್ಶಿ ಮಹದೇವಪ್ಪ ಮಳೆಮ್ಮನವರ, ಜಿಲ್ಲಾ ಅಧ್ಯಕ್ಷ ಹನುಮಂತಪ್ಪ ಹುಚ್ಚಣ್ಣನವರ, ತಾಲೂಕು ಅಧ್ಯಕ್ಷ ಆನಂದ ಕೆಳಗಿನಮನಿ, ಉಪಾಧ್ಯಕ್ಷ ಶಂಕರಗೌಡ ಪಾಟೀಲ, ಗಿರೀಶ ಪಾಟೀಲ, ರುದ್ರಪ್ಪ ಬಳಿಗಾರ, ಮಂಜುನಾಥ ಕಂಕಣವಾಡ, ಚಂದ್ರಶೇಖರ ನರ್ತಿ, ರವಿ ಗುಂಜಳ, ರಮೇಶ ದೊಡ್ದುರ, ಈರಣ್ಣ ಸಮಗೊಂಡ, ಫಕೀರಪ್ಪ ಕುಂದೂರ, ರಸೂಲಸಾಬ ನದಾಫ, ಹಜರತಅಲಿ ದೊಡ್ಮನಿ, ಹನುಮಂತಪ್ಪ ದೊಡಮನಿ ಸೇರಿದಂತೆ ಅನೇಕ ರೈತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net