ಶಿಡೇನೂರು ಹೆಸ್ಕಾಂ ಗ್ರಿಡ್ ಎದುರು ರೈತರ ಪ್ರತಿಭಟನೆ

farmer Protest In front of shidenur grid
Published on

ಬ್ಯಾಡಗಿ: ಕೊಳವೆ ಬಾವಿಗಳಿಗೆ ಹಗಲು-ರಾತ್ರಿ ಏಳು ತಾಸು ತ್ರಿಫೇಸ್ ವಿದ್ಯುತ್ ಪೂರೈಸುವ ಆದೇಶವಿದ್ದರೂ, ಅಧಿಕಾರಿಗಳು ವಿನಾಕಾರಣ ತೊಂದರೆ ನೀಡುತ್ತಿದ್ದಾರೆ. ನೀರಿಲ್ಲದೆ ಬೆಳೆ ಹಾಳಾಗುವಂತೆ ಮಾಡುತ್ತಿರುವ ಹೆಸ್ಕಾಂ ಅಧಿಕಾರಿಗಳು ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ವಿವಿಧ ಗ್ರಾಮಗಳ ರೈತರು ಶಿಡೇನೂರು ಹೆಸ್ಕಾಂ ಗ್ರಿಡ್ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ತಾಲೂಕಿನ ಆಣೂರು, ಕೊಲ್ಲಾಪುರ, ಶಿಡೇನೂರು, ಕೆರೂಡಿ, ತಡಸ, ನಂದಿಹಳ್ಳಿ, ಬಿದರಕಟ್ಟೆ ಸೇರಿದಂತೆ ವಿವಿಧ ಗ್ರಾಮಗಳ ಕೊಳವೆಬಾವಿ ರೈತರು ಹೆಸ್ಕಾಂ ಅಧಿಕಾರಿಗಳ ನೀತಿ ಖಂಡಿಸಿ ಸುಮಾರು ಎರಡು ತಾಸುಗಳ ಕಾಲ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಹೆಸ್ಕಾಂ ಇಂಜಿನೀಯರ್ ಆಗಮಿಸುವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.

ರೈತ ಕಿರಣಕುಮಾರ ಗಡಿಗೋಳ ಮಾತನಾಡಿ, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಗೋವಿನಜೋಳ, ಬೀಜೋತ್ಪಾದನೆ, ರೇಷ್ಮೆ, ಹೂವಿನ ಬೇಸಾಯ, ಅಡಕೆ, ಬಾಳೆ ಬೇಸಾಯದಲ್ಲಿ ತೊಡಗಿದ್ದೇವೆ. ಸರ್ಕಾರ ರೈತರ ಪರವಾಗಿ ಏಳು ತಾಸು ತ್ರಿಫೇಸ್ ವಿದ್ಯುತ್ ಪೂರೈಸಲು ಆದೇಶ ನೀಡಿದೆ. ಹೆಸ್ಕಾಂ ಇಂಜಿನಿಯರ್‌ಗಳು ಎರಡು ವಾರದಿಂದ ರಾತ್ರಿ, ಹಗಲು ಕೇವಲ ಎರಡು ತಾಸು ವಿದ್ಯುತ್ ಪೂರೈಸುವ ಮೂಲಕ ಬೆಳೆ ಹಾನಿಗೆ ಕಾರಣರಾಗಿದ್ದಾರೆ. ಬೆಳೆ ಹಂತಹಂತವಾಗಿ ಕ್ಷೀಣಿಸುತ್ತಾ ಒಣಗುವ ಹಂತದಲ್ಲಿವೆ. ಬೆಳೆ ಹಾನಿಗೆ ಹೆಸ್ಕಾಂ ಅಧಿಕಾರಿಗಳ ನೀತಿ ಕಾರಣವಾಗಿದೆ. ಹಾನಿಗೊಂಡ ಬೆಳೆಗೆ ಪ್ರತಿ ಎಕರೆಗೆ 1 ಲಕ್ಷ ರೂ. ಪರಿಹಾರ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆ ನಿರತ ರೈತರ ಬಳಿ ಆಗಮಿಸಿದ ಬ್ಯಾಡಗಿ ಹೆಸ್ಕಾಂ ಇಂಜಿನಿಯರ್ ಹಾಲೇಶ ಅಂತರವಳ್ಳಿ, ಬೇಸಿಗೆ ಅವಧಿಯಲ್ಲಿ ವಿದ್ಯುತ್ (ಜನರೇಷನ್) ಪೂರೈಕೆ ಕೊರತೆಯಿದೆ. ಈ ಹಿಂದೆ ಸರ್ಕಾರದ ಆದೇಶದಂತೆ ಪೂರೈಸಿದ್ದೇವೆ. ಕೆಲವೊಮ್ಮೆ ನಮಗೂ ತೊಂದರೆಯಿದೆ ಎಂದ ಅವರು, ನಾಳೆಯಿಂದ (ಅ. 11) ಏಳು ತಾಸು ಪೂರೈಸಲು ಸ್ಥಳದಲ್ಲಿ ಉಪ ಇಂಜಿನಿಯರ್‌ಗೆ ಸೂಚಿಸಿದರು. ಪೂರೈಕೆಯಲ್ಲಿ ವ್ಯತ್ಯಾಸವಾದಲ್ಲಿ ನೇರವಾಗಿ ತಮ್ಮನ್ನು ಸಂಪರ್ಕಿಸಬೇಕು ಎಂದು ತಿಳಿಸಿದರು.

ಇಂಜಿನಿಯರ್ ನೀಡಿದ ಭರವಸೆ ಮೇರೆಗೆ ರೈತರು ಪ್ರತಿಭಟನೆಯಿಂದ ಹಿಂದೆ ಸರಿದರು. ಗ್ರಾಮಸ್ಥರಾದ ಬಸವರಾಜ ಬಡ್ನಿ, ಪ್ರವೀಣ ಹೊಸಗೌಡ್ರ, ಮಹದೇವಪ್ಪ ಶಿಡೇನೂರು, ಗಂಗಾಧರಯ್ಯ ಹಿರೇಮಠ, ನಾಗನಗೌಡ್ರ ತೆವರಿ, ವೀರನಗೌಡ್ರ ತೆವರಿ, ಹನುಮಂತಪ್ಪ ರಡ್ಡೇರ, ಕುಮಾರ ಅಂಗರಗಟ್ಟಿ, ಬಸಪ್ಪ ಹುಲ್ಲತ್ತಿ, ಮಹೇಶ ಬ್ಯಾಡಗಿ, ಕುಮಾರ ಎಲಿ, ಮಹದೇವಪ್ಪ ಮಲ್ನಾಡದ, ಮಲ್ಲಪ್ಪ ಅರಳೀಕಟ್ಟಿ, ರುದ್ರಪ್ಪ ಪೂಜಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net