

ಮೈಸೂರು: ಹುಲಿ ದಾಳಿಯಿಂದ ರೈತರು ಸಾವಿಗೀಡಾಗುತ್ತಿದ್ದರೂ ಅರಣ್ಯ ಇಲಾಖೆ ಹುಲಿ ದಾಳಿ ತಡೆಯಲು ವಿಫಲವಾಗಿದೆ ಎಂದು ಆರೋಪಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದಿಂದ ಮಂಗಳವಾರ ಅರಣ್ಯ ಭವನದ ಎದುರು ಪ್ರತಿಭಟನೆ ನಡೆಯಿತು.
ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಯಾವುದೇ ಪ್ರಾಣಿಗಳು ಕಾಡಿನಿಂದ ನಾಡಿಗೆ ಬರಲಿಲ್ಲ, ಜನರ ಪ್ರಾಣಕ್ಕೆ ಹಾನಿಯಗಲಿಲ್ಲ. ಆ ಸಂದರ್ಭ ಕಾಡಿನಲ್ಲಿ ಸಫಾರಿ ನಡೆಯುತ್ತಿರಲಿಲ್ಲ. ಅರಣ್ಯದಲ್ಲಿ ಹೆಚ್ಚುತ್ತಿರುವ ಸಫಾರಿ ಹಾಗೂ ಅರಣ್ಯದಂಚಿನಲ್ಲಿ ನಿರ್ಮಾಣಗೊಂಡಿರುವ ರೆಸಾರ್ಟ್‌ಗಳಿಂದ ಪ್ರಾಣಿಗಳು ಆತಂಕಕ್ಕೆ ಒಳಗಾಗಿ ನಾಡಿಗೆ ಆಗಮಿಸುತ್ತಿವೆ. ಇದಕ್ಕೆ ಅರಣ್ಯ ಇಲಾಖೆಯ ಬೇಜವಾಬ್ದಾರಿಯೇ ಕಾರಣ. ಮತ್ತೆ ಏನಾದರೂ ಕಾಡು ಪ್ರಾಣಿಗಳಿಂದ ರೈತರು ಮೃತಪಟ್ಟರೆ ಅರಣ್ಯ ಕಚೇರಿಯನ್ನೇ ಬಂದ್ ಮಾಡಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲೆಯಲ್ಲಿ ಸಫಾರಿ ಸ್ಥಗಿತಗೊಳಿಸಬೇಕು, ಅರಣ್ಯದಂಚಿನಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿರುವ ರೆಸಾರ್ಟ್‌ಗಳನ್ನು ಕೂಡಲೇ ಬಂದ್ ಮಾಡಿಸಬೇಕು. ಆ ಮೂಲಕ ರೈತರ ಪ್ರಾಣಿ ಉಳಿಸಬೇಕು. ಹುಲಿ ದಾಳಿ ಭೀಯಿಂದ ರೈತರು ಕೃಷಿ ಚಟುವಟಿಕೆ ಕಯಗೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಡು ಪ್ರಾಣಿಗಳ ಹಾವಳಿ ತಡೆಯಲು ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹುಲಿ ದಾಳಿಗೆ ಒಳಗಾದ ರೈತರ ಕುಟುಂಬಗಳಿಗೆ 50 ಲಕ್ಷ ರೂ. ಪರಿಹಾರ ನೀಡಬೇಕು, ಕುಟುಂಬ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು, ಈ ಘಟನೆಗಳಿಗೆ ಹೊಣೆಗಾರರಾದ ತಪ್ಪಿತಸ್ಥ ಅರಣ್ಯ ಅಧಿಕಾರಿಗಳನ್ನು ತಕ್ಷಣವೇ ಅಮಾನತುಗೊಳಿಸಬೇಕು, ಕಾಡು ಪ್ರಾಣಿಗಳ ಹಾವಳಿಯಿಂದ ರೈತರ ಜೀವ ಮತ್ತು ಆಸ್ತಿ ರಕ್ಷಿಸಲು ತಕ್ಷಣ ಪರಿಣಾಮಕಾರಿ ಕ್ರಮಗಳು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಮನವಿ ಪತ್ರ ಸ್ವೀಕರಿಸಿ ಮಾತನಾಡಿ, ಕಾಡಂಚಿನ ಗ್ರಾಮಗಳ ಆಸುಪಾಸಿನಲ್ಲಿ ವನ್ಯಜೀವಿಗಳ ಹಾವಳಿ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಹುಲಿಗಳು ಏಕಾಂಗಿಯಾಗಿ ವಾಸಿಸುತ್ತವೆ. ಇದೀಗ ಹುಲಿಗಳ ಮಿಲನದ ಸಮಯವಾಗಿದ್ದು, ಹೆಣ್ಣು ಹುಲಿಗಳನ್ನು ಹುಡುಕಿಕೊಂಡು ಗಂಡು ಹುಲಿಗಳು ಒಂದೆಡೆಯಿಂದ ಮತ್ತೊಂದು ಕಡೆಗೆ ಓಡಾಡುತ್ತವೆ. ಈ ರೀತಿ ಓಡಾಟದ ಸಂದರ್ಭದಲ್ಲಿ ಹುಲಿಗಳು ಮನುಷ್ಯರ ಮೇಲೆ ದಾಳಿ ನಡೆಸಿದೆ ಎಂದರು.
ಬೇಟೆಯ ಉದ್ದೇಶಕ್ಕೆ ಹುಲಿ ಮನುಷ್ಯರ ಮೇಲೆ ದಾಳಿ ನಡೆಸಿಲ್ಲ. ಇದುವರೆಗೆ ಮನುಷ್ಯರ ಮೇಲೆ ದಾಳಿ ಮಾಡಿರುವ ಹುಲಿಗಳು ಮನುಷ್ಯನ ದೇಹವನ್ನು ತಿಂದಿಲ್ಲ. ಅಲ್ಲದೆ, ಹುಲಿಗಳು ಒಂದು ಸೀಮಿತ ಪ್ರದೇಶದಲ್ಲಿ ವಾಸಿಸುತ್ತವೆ. ಸರಹದ್ದು ವಿಸ್ತರಣೆಗಾಗಿ ನಡೆಯುವ ಕಾದಾಟದಲ್ಲಿ ದುರ್ಬಲ ಹುಲಿಗಳು ಕಾಡಂಚಿನ ಗ್ರಾಮಗಳತ್ತ ಬರುತ್ತವೆ. ಇದೇ ಹುಲಿಗಳು ಮನುಷ್ಯರ ಮೇಲೆ ದಾಳಿ ನಡೆಸುವ ಸಂಭವವಿದೆ. ಹುಲಿ ದಾಳಿಯಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ. ಹುಲಿಗಳನ್ನು ಸೆರೆ ಹಿಡಿಯಲು ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಅತ್ತಹಳ್ಳಿ ದೇವರಾಜ್, ಪಿ. ಸೋಮಶೇಖರ್, ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ವರಕೋಡು ನಾಗೇಶ್, ಮಾರ್ಬಳ್ಳಿ ನೀಲಕಂಠಪ್ಪ, ಲಕ್ಷ್ಮೀಪುರ ವೆಂಕಟೇಶ್, ಕುರುಬೂರು ಸಿದ್ದೇಶ್, ದೇವನೂರು ವಿಜಯೇಂದ್ರ, ಪಟೇಲ್ ಶಿವಮೂರ್ತಿ, ಹಂಪಾಪುರ ರಾಜೇಶ್, ಬಿ.ಪಿ. ಪರಶಿವಮೂರ್ತಿ, ಕಾಟೂರು ಮಹದೇವಸ್ವಾಮಿ, ಕುರುಬೂರು ಪ್ರದೀಪ್, ಕಿರಗಸೂರು ಪ್ರಸಾದ್ ನಾಯಕ ಮತ್ತಿತರರು ಪಾಲ್ಗೊಂಡಿದ್ದರು.