ಭತ್ತ ಖರೀದಿ ಕೇಂದ್ರ ತೆರೆಯಲು ಆಗ್ರಹಿಸಿ ಮೈಸೂರಿನಲ್ಲಿ ರೈತರ ಪ್ರತಿಭಟನೆ

Farmers protest in front of Mysore DC Office
Published on

ಮೈಸೂರು: ಭತ್ತ ಖರೀದಿ ಕೇಂದ್ರ ಆರಂಭಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಯಿತು.

ಕೇಂದ್ರ ಸರ್ಕಾರ ನಿಗದಿ ಮಾಡಿರುವ ಎಫ್‌ಆರ್‌ಪಿ 2369 ರೂ. ಜತೆಗೆ ರಾಜ್ಯ ಸರ್ಕಾರ ಪ್ರತಿ ಕ್ವಿಂಟಾಲ್ ಭತ್ತಕ್ಕೆ 500 ರೂ. ಹೆಚ್ಚುವರಿ ದರ ನಿಗದಿ ಮಾಡಬೇಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನೋಂದಣಿ ಪ್ರಕ್ರಿಯೆ ಆರಂಭಿಸಬೇಕು. ಪಡಿತರ ವಿತರಣೆಗೆ ಬೇರೆ ರಾಜ್ಯದ ಅಕ್ಕಿ ಬಳಸುತ್ತಿದ್ದು, ಅದನ್ನು ನಿಲ್ಲಿಸಿ ರೈತರು ಬೆಳೆದ ಎಲ್ಲ ಭತ್ತವನ್ನೂ ಖರೀದಿ ಕೇಂದ್ರದ ಮೂಲಕ ಖರೀದಿಸಲು ಕೃಷಿ ಮತ್ತು ಕಂದಾಯ ಇಲಾಖೆಯ ಜಂಟಿ ಸಮಿತಿ ರಚಿಸಬೇಕು ಎಂದು ರೈತರು ಆಗ್ರಹಿಸಿದರು.

ಕಟಾವು ಪ್ರಾರಂಭವಾದ ತಕ್ಷಣ ಭತ್ತ ಖರೀದಿಗೆ ಕ್ರಮ ಕೈಗೊಳ್ಳಬೇಕು. ಅಧಿಕ ಷರತ್ತುಗಳನ್ನು ವಿಧಿಸಿ ರೈತರು ಖರೀದಿ ಕೇಂದ್ರದಲ್ಲಿ ಭತ್ತ ಮಾರಾಟ ಮಾಡದ ರೀತಿ ನಿಯಮ ಸೃಷ್ಟಿಸಬಾರದು. ದಲ್ಲಾಳಿಗಳು, ಬಂಡವಾಳಶಾಹಿಗಳು ರೈತರ ಹೆಸರಿನಲ್ಲಿ ಭತ್ತ ಮಾರಾಟ ಮಾಡುವುದರಿಂದ ಬಂಡವಾಳಶಾಹಿಗಳಿಗೆ ಲಾಭವಾಗುತ್ತದೆ. ಸಾಲಸೋಲ ಮಾಡಿ ಭತ್ತ ಬೆಳೆದು ಕಡಿಮೆ ಬೆಲೆಗೆ ಮಾರಾಟ ಮಾಡಿ ನಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ರೈತರು ಬೆಳೆದ ಭತ್ತ ಸಂಗ್ರಹ ಮಾಡಲು ಸಂಗ್ರಹ ಕೇಂದ್ರವೇ ಇಲ್ಲ. ಸಾಲ ತೀರಿಸಲು ತಕ್ಷಣ ಹಣದ ಅವಶ್ಯಕತೆ ಇರುವುದರಿಂದ ದಲ್ಲಾಳಿಗಳಿಗೆ ಮಾರಾಟ ಮಾಡಿ ನಷ್ಟ ಅನುಭವಿಸುತ್ತಾರೆ. ಹೀಗಾಗಿ ತಕ್ಷಣ ನೋಂದಣಿ ಪ್ರಕ್ರಿಯೆ ಆರಂಭಿಸಿ ಭತ್ತ ಖರೀದಿಗೆ ಸಿದ್ಧತೆ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಭತ್ತ ಖರೀದಿ ಮಾಡಿದ ಮೂರು ದಿನದ ಒಳಗಾಗಿ ರೈತರ ಖಾತೆಗೆ ನೇರವಾಗಿ ಹಣ ಜಮಾ ಆಗಬೇಕು. ಎಪಿಎಂಸಿಗಳ ಮುಖಾಂತರ ಭತ್ತವನ್ನು ಅಡಮಾನ ಮಾಡುವ ರೈತರಿಗೆ ಮಾರುಕಟ್ಟೆ ಬೆಲೆಯ ಶೇ.80ರಷ್ಟು ಸಾಲವನ್ನು ಬ್ಯಾಂಕ್‌ಗಳು ನೀಡುವ ರೀತಿ ಕ್ರಮ ವಹಿಸಬೇಕು. ಭತ್ತ ಖರೀದಿ ದಲ್ಲಾಳಿಗಳು ಹಾಗೂ ಏಜನ್ಸಿಗಳು ಎಫ್‌ಆರ್‌ಪಿ ದರಕ್ಕಿಂತ ಕಡಿಮೆ ಬೆಲೆಗೆ ಖರೀದಿ ಮಾಡಿದರೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ರಾಜ್ಯಾದ್ಯಂತ ಭತ್ತ ಖರೀದಿಗಾಗಿ ರಾಜ್ಯ ಸರ್ಕಾರ ವಿಶೇಷ ಆವರ್ತ ನಿಧಿ ಘೋಷಣೆ ಮಾಡಬೇಕು. ಈ ಮೂಲಕ ಭತ್ತ ಖರೀದಿದಾರರನ್ನು ರಕ್ಷಣೆ ಮಾಡಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಪದಾಧಿಕಾರಿಗಳಾದ ಎಚ್.ಎಸ್. ರಾಜು, ಕೆರೆಹುಂಡಿ ರಾಜಣ್ಣ, ಒಳಗೆರೆ ಗಣೇಶ್, ಮಲಿಯೂರು ಮಹೇಂದ್ರ, ಹೊನ್ನಗೌಡನಹಳ್ಳಿ ಮಹೇಶ್, ದೇವನೂರು ನಾಗೇಂದ್ರ, ದೇವಿಮ್ಮನಹಳ್ಳಿ ಪ್ರಭು, ಚಿಕ್ಕಬಸಪ್ಪ, ಶ್ರೀಕಂಠ ಸ್ವಾಮಿ, ಅಂಡುವಿನಹಳ್ಳಿ ಜಗದೀಶ್ ಹಾಗೂ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net