ಮಡಿಕೇರಿ ಸೆಸ್ಕ್ ಕಚೇರಿ ಎದುರು ರೈತರ ಪ್ರತಿಭಟನೆ

Farmers' protest in front of Madikeri Cesc office
Published on

ಮಡಿಕೇರಿ:

೧೦ ಹೆಚ್‌ಪಿ ವಿದ್ಯುತ್ ಪಂಪ್ ಸೆಟ್‌ಗಳ ಸಂಪರ್ಕ ಕಡಿತ ಮಾಡುತ್ತಿರುವ ಸೆಸ್ಕ್ ಕ್ರಮ ಖಂಡಿಸಿ ಬುಧವಾರ ಇಲ್ಲಿನ ಸೆಸ್ಕ್ ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಿದರು. ನೀರಾವರಿ ಪಂಪ್ ಸೆಟ್ ಬಿಲ್ ಮನ್ನಾ ಮಾಡುವುದಾಗಿ ಈ ಹಿಂದಿನ ಮೂರೂ ಸರ್ಕಾರಗಳು ಘೋಷಣೆ ಮಾಡಿದ್ದವು. ಆದರೂ ಸೆಸ್ಕ್ ಅಧಿಕಾರಿಗಳು ಯಾವುದೇ ಪೂರ್ವ ಮಾಹಿತಿ ಇಲ್ಲದೆ ಪಂಪ್ ಸೆಟ್‌ಗಳ ವಿದ್ಯುತ್ ಸಂಪರ್ಕ ಕಡಿತ ಮಾಡುತ್ತಿದ್ದಾರೆ. ಇದರಿಂದಾಗಿ ಕುಡಿಯುವ ನೀರು ಮಾತ್ರವಲ್ಲದೆ ಕಾಫಿ ತೋಟಕ್ಕೆ ನೀರು ಹಾಯಿಸಲೂ ಸಮಸ್ಯೆ ಆಗುತ್ತಿದೆ. ಕೊಡಗು ಬರ ಪೀಡಿತ ಪ್ರದೇಶ ಎಂದು ಘೋಷಣೆ ಆಗಿದ್ದರೂ ಅಧಿಕಾರಿಗಳು ವಿದ್ಯುತ್ ಕಡಿತ ಮಾಡಿ ಸಮಸ್ಯೆ ಉಂಟು ಮಾಡುತ್ತಿದ್ದಾರೆ. ಇದರಿಂದಾಗಿ ಜನ, ಜಾನುವಾರುಗಳಿಗೆ ಕುಡಿಯಲು ನೀರು ಇಲ್ಲದಂತಾಗಿದೆ. ಅಧಿಕಾರಿಗಳ ಕಿರುಕುಳ ಜಾಸ್ತಿ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ರೈತ ಮುಖಂಡ ಹೇರೂರು ಚಂದ್ರಶೇಖರ್, ಈ ಹಿಂದೆ ಸುಮಾರು ೩-೪ ಬಾರಿ ಕೊಡಗಿನ ರೈತರು ಸೆಸ್ಕ್ ಕಚೇರಿಗೆ ಮುತ್ತಿಗೆ ಹಾಕಿ ವಿವರವಾದ ಮನವಿಗಳನ್ನು ಸಲ್ಲಿಸಲಾಗಿದೆ. ಇತರ ಬೆಳೆಗಳಿಗೆ ನೀಡುತ್ತಿರುವಂತೆಯೇ ೧೦ ಹೆಚ್‌ಪಿ ಒಳಗಿನ ವಿದ್ಯುತ್ ಮೋಟಾರುಗಳಿಗೆ ಸಂಬಂಧಿಸಿದಂತೆ ಕೊಡಗಿನ ರೈತರಿಗೂ ವಿನಾಯಿತಿ ವಿಸ್ತರಿಸಿಕೊಡಬೇಕೆಂದು ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಇತ್ತೀಚೆಗೆ ಕೊಡಗಿಗೆ ಮುಖ್ಯಮಂತ್ರಿಗಳು ಆಗಮಿಸಿದ ಸಂದರ್ಭವೂ ಅವರೊಡನೆ ಚರ್ಚಿಸಿ, ಮನವಿ ಸಲ್ಲಿಸಲಾಗಿತ್ತು. ಕೂಡಲೇ ಈ ಬಗ್ಗೆ ಸರ್ಕಾರಿ ಆದೇಶ ಹೊರಡಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದರು. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಬಾಕಿ ವಿದ್ಯುತ್ ಬಿಲ್ ಪಾವತಿ ಮಾಡಿದರೆ ಆ ಹಣವನ್ನು ಬ್ಯಾಂಕ್ ಖಾತೆಗೆ ಮೂಲಕ ಹಿಂತಿರುಗಿಸುವ ಇಲಾಖೆ ಪ್ರಸ್ತಾಪವನ್ನು ರೈತರು ವಿರೋಧಿಸಿದ್ದಾರೆ. ರೈತರ ಜಮೀನಿಗೆ ಸೆಸ್ಕ್ ಸಿಬ್ಬಂದಿ ಯಾವುದೇ ಸರ್ಕಾರಿ ಆದೇಶದ ಪ್ರತಿಗಳನ್ನು ತರದೇ ಅತಿಕ್ರಮ ಪ್ರವೇಶ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ರೈತರ ವಿದ್ಯುತ್ ಕಡಿತ ಮಾಡಬಾರದು. ಈಗಾಗಲೇ ವಿದ್ಯುತ್ ಕಡಿತಗೊಳಿಸಿರುವ ರೈತರ ಪಂಪ್‌ಸೆಟ್‌ಗಳಿಗೆ ಮತ್ತೆ ಸಂಪರ್ಕ ಕೊಡಬೇಕು. ಒಂದು ವೇಳೆ ರೈತರ ತೊಂದರೆಗಳಿಗೆ ಇಲಾಖೆ ಸ್ಪಂದಿಸದಿದ್ದಲ್ಲಿ ರೈತರು ಮುಂದೆ ಉಗ್ರ ಹೋರಾಟ, ಧರಣಿ, ಸತ್ಯಾಗ್ರಹ ನಡೆಸಲಿದ್ದಾರೆ ಎಂದು ಎಚ್ಚರಿಸಿದರು. ಈ ಸಂಬಂಧದ ಮನವಿಯನ್ನು ಸೆಸ್ಕ್ ಕಾರ್ಯಪಾಲಕ ಅಭಿಯಂತರರಾದ ಅನಿತಾ ಭಾಯಿ ಅವರಿಗೆ ನೀಡಲಾಯಿತು.

ರೈತಸಂಘದ ಪ್ರಮುಖರಾದ ಅರುಣ್‌ಕುಮಾರ್, ಶಶಿ, ಜಗನ್ನಾಥ್, ಪ್ರವೀಣ್, ಅರ್ಪಿತ್, ಅಯ್ಯಣ್ಣ ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net