ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ: ಕೀಲಾರ ಸೆಸ್ಕ್ ಕಚೇರಿಗೆ ರೈತರ ಮುತ್ತಿಗೆ

2
Published on

ಮಂಡ್ಯ: ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕೆಂದು ಒತ್ತಾಯಿಸಿ ತಾಲೂಕಿನ ಕೀಲಾರ ಗ್ರಾಮದ ಸೆಸ್ಕ್ ಕಚೇರಿಗೆ ಗುರುವಾರ ರೈತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಕಚೇರಿ ಎದುರು ಜಮಾಯಿಸಿದ ಕೀಲಾರ ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ರಾಜ್ಯಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಹದಿನೈದು ದಿನದಿಂದ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ. ಪರಿಣಾಮ ಬೆಳೆಗಳು ಒಣಗಲಾರಂಭಿಸಿದೆ. ಈ ಬಗ್ಗೆ ಎಷ್ಟು ಬಾರಿ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿದರು.

ಈ ವರ್ಷ ಪೂರ್ವ ಮುಂಗಾರು ಹಾಗೂ ಮುಂಗಾರು ನಿರೀಕ್ಷಿತ ಪ್ರಮಾಣ ಆಗಲಿಲ್ಲ. ಇದರಿಂದಾಗಿ ಹಲವು ರೈತರು ಬಿತ್ತನೆ ಮಾಡಿಲ್ಲ. ಈ ನಡುವೆಯೂ ಕೆಲವರು ಕೃಷಿ ಮಾಡಿದ್ದಾರೆ. ಆದರೆ ಸೆಸ್ಕ್ ಅಧಿಕಾರಿಗಳು ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ. ಕೆಲವೊಮ್ಮೆ ದಿನಗಟ್ಟಲೇ ವಿದ್ಯುತ್ ಕೊಡುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಸಂಸ್ಥೆ ನಷ್ಟದಲ್ಲಿದೆ. ಕಲ್ಲಿದ್ದಲ್ಲು ಖರೀದಿ ಮಾಡಿಲ್ಲ. ನಾವೇನು ಮಾಡುವುದೆಂದು ಸಿಬ್ಬಂದಿ ಬೇಜವಾಬ್ದಾರಿ ಉತ್ತರ ನೀಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಗ್ರಾಮದ ಮುಖಂಡರಾದ ಕೃಷ್ಣೇಗೌಡ, ಗೆಂಡಪ್ಪ, ಕೃಷ್ಣಪ್ಪ, ರಮೇಶ್, ನಿತ್ಯಾನಂದ, ನಂದೀಶ, ದಯಾನಂದ, ಶೇಖರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net