

ಶಿಗ್ಗಾಂವಿ: ಕೃಷಿ ಪಂಪ್‌ಸೆಟ್‌ಗಳಿಗೆ ಪ್ರತಿನಿತ್ಯ ಹಗಲಿನಲ್ಲಿ ಏಳು ಗಂಟೆಗಳ ಕಾಲ ವಿದ್ಯುತ್ ಪೂರೈಸಲು ಒತ್ತಾಯಿಸಿ ಪಟ್ಟಣದ ಹೆಸ್ಕಾಂ ಕಚೇರಿ ಎದುರು ಮಾನವ ಹಕ್ಕುಗಳ ಸಮಿತಿ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ಮತ್ತು ರೈತ ಸಂಘದಿಂದ ಶನಿವಾರ ಪ್ರತಿಭಟನೆ ನಡೆಸಿ, ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಪಟ್ಟಣದ ರಾಣಿ ಚನ್ನಮ್ಮ ವೃತ್ತದಿಂದ ಮೆರವಣಿಗೆ ಮೂಲಕ ತೆರಳಿ ಹೆಸ್ಕಾಂ ಕಚೇರಿ ಎದುರು ರೈತ ಪರ ಘೋಷಣೆ ಕೂಗುತ್ತಾ ಕೆಲ ಹೊತ್ತು ಪ್ರತಿಭಟನೆ ನಡೆಸಲಾಯಿತು.
ಮೊದಲು ರೈತರ ಪಂಪ್‌ಸೆಟ್‌ಗಳಿಗೆ ಹಗಲು 7 ತಾಸು ವಿದ್ಯುತ್ ಪೂರೈಕೆ ಮಾಡಲಾಗುತ್ತಿತ್ತು. ಆದರೆ, ಇತ್ತಿಚೀನ ಕೆಲವು ದಿನಗಳಿಂದ ಹಗಲು 3 ತಾಸು ರಾತ್ರಿ 4 ತಾಸು ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಇದರಿಂದ ರಾತ್ರಿ ವೇಳೆಯಲ್ಲಿ ಬೆಳೆಗೆ ನೀರು ಹಾಯಿಸಲು ರೈತರಿಗೆ ತೊಂದರೆಯಾಗುತ್ತಿದೆ. ರಾತ್ರಿ ವೇಳೆ ಹಾವುಗಳ ಕಡಿತ ಸೇರಿದಂತೆ ಇತರ ಅವಘಡಗಳಿಂದ ರೈತರು ಭಯಬೀಳುವಂತಾಗಿದೆ. ಅಧಿಕಾರಿಗಳು ಕೂಡಲೇ ರೈತರ ಮತ್ತು ಸಂಘಟನೆಗಳ ಮನವಿಗೆ ಸ್ಪಂದಿಸಿ, ಹಗಲಿನಲ್ಲಿ 7 ತಾಸು ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು.
ಹೆಸ್ಕಾಂ ಎಇಇ ಅಧಿಕಾರಿ ಸಿ.ಬಿ. ಹೊಸಮನಿ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಬೇಡಿಕೆ ಆಲಿಸಿ, ರೈತರಿಗೆ ಅನುಕೂಲವಾಗುವಂತೆ ಹಗಲಿನಲ್ಲಿ 7 ತಾಸು ವಿದ್ಯುತ್ ಪೂರೈಕೆ ಮಾಡಲಾಗಿದೆ. ಕೆಲ ದಿನಗಳಿಂದ ಗ್ರಿಡ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿದ್ದರಿಂದ ಕೆಲವು ಕಡೆ ನಿರಂತರ 7 ತಾಸು ವಿದ್ಯುತ್ ಪೂರೈಕೆ ಮಾಡಲು ಆಗಿಲ್ಲ. ಮುಂದಿನ ದಿನಗಳಲ್ಲಿ ಮೇಲಧಿಕಾರಿಗಳ ಜತೆಗೆ ಚರ್ಚೆ ಮಾಡಿ, ಹಗಲು ವೇಳೆಯಲ್ಲಿ 7 ತಾಸು ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಬಳಿಕ ರೈತರು ಪ್ರತಿಭಟನೆ ಹಿಂಪಡೆದರು.
ರೈತ ಸಂಘದ ತಾಲೂಕು ಅಧ್ಯಕ್ಷ ಮುತ್ತಣ್ಣ ಗುಡಗೇರಿ, ಶಂಕರಗೌಡ ಪಾಟೀಲ, ಬಸವರಾಜ ಪಟ್ಟಣಶೆಟ್ಟಿ, ಆನಂದ ಕೆಳಗಿನಮನಿ, ಮಾಲತೇಶ ಭಾರಕೆರ, ಕರಬಸಪ್ಪ ಜಟ್ಟಪ್ಪನವರ, ದಯಾನಂದ ಮೆಣಸಿನಕಾಯಿ, ನಾಗಪ್ಪ ಕೊಟ್ಟಣದ, ಈರಪ್ಪ ಸುಣಗಾರ, ಅಶೋಕ ಮಡ್ಲಿ, ನೀಲವ್ವ ಹೋತನಹಳ್ಳಿ, ಕಮಲವ್ವ ಬಾಡದ, ಸರೋಜವ್ವ ಯತ್ನಳ್ಳಿ, ಶಾರದಾ ಗುಡಗೇರಿ ಇತರರಿದ್ದರು.