ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಮುಂದೆ ರೈತರ ಪ್ರತಿಭಟನೆ 5ನೇ ದಿನಕ್ಕೆ

IMG-20240210-WA0135
ನಂಜನಗೂಡು ತಾಲೂಕಿನ ಅಳಗಂಚಿ ಗ್ರಾಮದ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಮುಂದೆ ರೈತರು ಶನಿವಾರವೂ ಮುಷ್ಕರ ಮುಂದುವರಿಸಿದರು.
Published on

ನಂಜನಗೂಡು: ಕಾಯಂ ಉದ್ಯೋಗ ನೀಡುವಂತೆ ಒತ್ತಾಯಿಸಿ ತಾಲೂಕಿನ ಅಳಗಂಚಿ ಗ್ರಾಮದ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಮುಂದೆ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ನಾಲ್ಕನೇ ದಿನ ಪೂರೈಸಿದ್ದು, ರೈತರ ಹೋರಾಟ ತೀವ್ರಗೊಂಡಿದೆ.

ರೈತರು ಕಾರ್ಖಾನೆಗೆ ಸರಬರಾಜಾಗುವ ಕಬ್ಬಿನ ಲಾರಿಗಳು ಹಾಗೂ ಕಾರ್ಮಿಕರು ಕಾರ್ಖಾನೆ ಪ್ರವೇಶಿಸದಂತೆ ತಡೆದಿದ್ದಾರೆ. ಗುರುವಾರದಿಂದ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತಗೊಂಡಿದೆ.

ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆ ಜಿಲ್ಲಾ ಸಂಚಾಲಕ ಎಚ್.ಎಂ.ಬಸವರಾಜು ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ನಾಲ್ಕು ದಿನಗಳಿಂದ 80ಕ್ಕೂ ಹೆಚ್ಚು ರೈತ ಕುಟುಂಬದವರು ಕಾರ್ಖಾನೆ ಮುಂಭಾಗ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಶುಕ್ರವಾರ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ದಿನೇಶ್ ಫೆ.12 ರಂದು ಜಿಪಂ ಕಚೇರಿಯ ದೇವರಾಜ ಅರಸು ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಸ್ಯೆಯ ಬಗ್ಗೆ ಚರ್ಚಿಸಲು ಸಭೆ ಕರೆದಿದ್ದು, ರೈತರು ಭಾಗವಹಿಸುವಂತೆ ಆಹ್ವಾನ ನೀಡಿದ್ದರು. ಆದರೆ ಮುಖಂಡರಾದ ಹೊಸಕೋಟೆ ಬಸವರಾಜು, ಉಗ್ರ ನರಸಿಂಹೇಗೌಡ ಹಾಗೂ ಕಾರ್ಮಿಕ ಮುಖಂಡ ಚಂದ್ರಶೇಖರ್ ಮೇಟಿ ಅವರು ಈಗಾಗಲೇ ಈ ವಿಚಾರವಾಗಿ ಬಹಳಷ್ಟು ಸಭೆಗಳು ನಡೆದಿದ್ದರೂ ಪ್ರಯೋಜನವಾಗಿಲ್ಲ, ಹೀಗಾಗಿ ಸಭೆಯನ್ನು ಬಹಿಷ್ಕರಿಸಲಾಗಿದೆ. ಕಾರ್ಖಾನೆ ಮುಂದೆ ಮುಷ್ಕರ ನಡೆಸುತ್ತಿರುವ ರೈತರ ಮುಂದೆ ಸಭೆ ನಡೆಸಬೇಕು. ಯಾವುದೇ ಕಾರಣಕ್ಕೂ ಮುಷ್ಕರ ವಾಪಸ್ ಪಡೆಯುವುದಿಲ್ಲ ಎಂದು ತಿಳಿಸಿದರು.

ಗುರುವಾರ ಕಾರ್ಖಾನೆಯ ಉಪಾಧ್ಯಕ್ಷ ವೇಲುಸ್ವಾಮಿ ಕೆಐಎಡಿಬಿ ಆದೇಶವನ್ನು ಕಾರ್ಖಾನೆ ಆಡಳಿತ ಮಂಡಳಿ ಅನುಸರಿಸುವುದಿಲ್ಲ, ಸರ್ಕಾರದ ಜತೆ ಈ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ. ಹೀಗಾಗಿ ಕಾರ್ಖಾನೆಗಾಗಿ ಭೂಮಿ ಕಳೆದುಕೊಂಡ 40 ರೈತರ ಮಕ್ಕಳಿಗೆ ಕಾಯಂ ಉದ್ಯೋಗ ನೀಡುವವರೆಗೆ ಮುಷ್ಕರ ಮುಂದುವರಿಯುತ್ತದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ರೈತ ನಾಯಕ ಬೊಕ್ಕಹಳ್ಳಿ ನಂಜುಂಡಸ್ವಾಮಿ, ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ ಮೇಟಿ, ಜನಾಂದೋಲನಗಳ ಮಹಾಮೈತ್ರಿಯ ಜಿಲ್ಲಾ ಸಂಚಾಲಕ ಉಗ್ರನರಸಿಂಹೇಗೌಡ, ಮಹೇಶ್. ಕೆ.ಪುನೀತ್, ರಾಜು, ಮಂಜುನಾಥ್, ಬಸವಣ್ಣ ನಾಯ್ಕ, ನಾಗಮ್ಮ, ಕೆಂಬಾಳಮ್ಮ, ಕೆಂಪಮ್ಮ ಉಪಸ್ಥಿತರಿದ್ದರು.

ನಂಜನಗೂಡು ತಾಲೂಕಿನ ಅಳಗಂಚಿ ಗ್ರಾಮದ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಮುಂದೆ ರೈತರು ಮುಷ್ಕರ ನಡೆಸುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕರು ಜಿಪಂ ಕಚೇರಿಯಲ್ಲಿ ಕರೆದಿರುವ ಸಭೆಗೆ ನೀಡಿದ ಆಹ್ವಾನವನ್ನು ರೈತರು ತಿರಸ್ಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net