

ಶಿಗ್ಗಾಂವಿ: ಪಟ್ಟಣದಲ್ಲಿ ವ್ಯಾಪಾರಸ್ಥರು ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಗೊಬ್ಬರ ಮಾರಾಟ ಮಾಡುತ್ತಿದ್ದಾರೆ. ಕೃಷಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ವಿವಿಧ ರೈತ ಸಂಘಟನೆ ಮುಖಂಡರು ಸೋಮವಾರ ತಾಲೂಕು ಸಹಾಯಕ ಕೃಷಿ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಮುಂಗಾರು ಪ್ರಾರಂಭದಿಂದಲೂ ಇಲ್ಲಿನ ವ್ಯಾಪಾರಸ್ಥರು ರೈತರಿಗೆ ಅಗತ್ಯವಿರುವ ಗೊಬ್ಬರಗಳ ಜತೆ ಇತರೆ ಗೊಬ್ಬರಗಳನ್ನು ಲಿಂಕ್ ಮಾಡಿ ಕೊಡುತ್ತಿದ್ದಾರೆ. ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಅಕ್ರಮ ಗೊಬ್ಬರ ಮಾರಾಟಕ್ಕೆ ಕಡಿವಾಣ ಹಾಕುವಲ್ಲಿ ತಾಲೂಕಾಡಳಿತ ವಿಫಲವಾಗಿದೆ ಎಂದು ಪ್ರತಿಭಟನಾನಿರತ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳು ಇಲಾಖೆಗೆ ಬರುವ ರೈತರೊಂದಿಗೆ ಮತ್ತು ರೈತ ಮುಖಂಡರೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತಾರೆ. ರೈತರಿಗೆ ಅನ್ಯಾಯವಾಗುತ್ತಿದ್ದರೂ ವ್ಯಾಪಾರಸ್ಥರೊಂದಿಗೆ ಇಲ್ಲಿನ ಅಧಿಕಾರಿಗಳು ಶಾಮೀಲಾಗಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಎಂದು ಘೊಷಣೆ ಕೂಗಿದರು.
ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ, ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಗೊಬ್ಬರ ಮಾರಾಟ ಮಾಡುವ ವ್ಯಾಪಾರಸ್ಥರು ಮತ್ತು ರೈತರೊಂದಿಗೆ ಅಸಭ್ಯವಾಗಿ ನಡೆದುಕೊಂಡ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು ಎಂದು ಭರವಸೆ ನೀಡಿದರು. ನಂತರ ರೈತರು ಪ್ರತಿಭಟನೆ ಹಿಂಪಡೆದರು.
ರೈತ ಮುಖಂಡರಾದ ಆನಂದ ಕೆಳಗಿನಮನಿ, ಶಂಕರಗೌಡ್ರ ಪಾಟೀಲ, ರುದ್ರಪ್ಪ ಬಳಿಗಾರ, ಗಿರಿಧರಗೌಡ ಪಾಟೀಲ, ಪ್ರಕಾಶ ಕ್ಯಾಲಕೊಂಡ, ದೇವರಾಜ ದೊಡ್ಡಮನಿ, ಶಿವಾನಂದ ಜೇಡಿಮಠ, ವಿರೂಪಾಕ್ಷಪ್ಪ ಪಾಟೀಲ, ದಯಾನಂದ ಮೆಣಸಿನಕಾಯಿ, ಆಕಾಶ ಮಡ್ಲಿ, ರಮೇಶ ಜೋಳದ, ಬಸವರಾಜ ಗಂಗೆನೂರ, ಇತರರಿದ್ದರು.