ಸಾಲ ಮನ್ನಾಕ್ಕೆ ಆಗ್ರಹಿಸಿ ದೆಹಲಿಯಲ್ಲಿ ಫೆ.13 ರಂದು ರೈತರ ಪ್ರತಿಭಟನೆ

kuruburu shanthakumar
Published on

ಮೈಸೂರು: ದೇಶದ ರೈತರ ಸಂಪೂರ್ಣ ಸಾಲ ಮನ್ನಾಕ್ಕೆ ಒತ್ತಾಯಿಸಿ ದೆಹಲಿಯಲ್ಲಿ ಫೆ.13 ರಂದು ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ರೈತರ ಮಹಾಸಂಗಮ ರ‌್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕರುಬೂರು ಶಾಂತಕುಮಾರ್ ಹೇಳಿದರು.

ದೇಶದ ರೈತರನ್ನು ರಕ್ಷಣೆ ಮಾಡಲು ಕೇಂದ್ರ ಸರ್ಕಾರ ವಿಶ್ವ ವ್ಯಾಪಾರ ಒಪ್ಪಂದದಿಂದ ಹೊರಗೆ ಬರಬೇಕು, ಕಬ್ಬಿನ ಎಫ್‌ಆರ್‌ಪಿ ದರವನ್ನು ಕನಿಷ್ಠ 4000 ರೂ.ಗಳಿಗೆ ಏರಿಕೆ ಮಾಡಬೇಕು, 60 ವರ್ಷ ತುಂಬಿದ ರೈತರಿಗೆ ಕನಿಷ್ಠ 10,000 ಪಿಂಚಣಿ ನೀಡುವ ಯೋಜನೆ ಜಾರಿಗೆ ತರಬೇಕು, ಬೆಳೆ ವಿಮೆ ಪದ್ಧತಿ ಬದಲಾಯಿಸಿ ಎಲ್ಲ ಬೆಳೆಗಳಿಗೂ ಬೆಳೆವಿಮೆ ಜಾರಿಗೊಳಿಸಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಜಿಲ್ಲೆಯ ಬಣ್ಣಾರಿ ಸಕ್ಕರೆ ಕಾರ್ಖಾನೆಯು ರಹದಾರಿ ನಿಯಮಗಳನ್ನು ಉಲ್ಲಂಗಿಸಿ ಸರ್ಕಾರಕ್ಕೆ ಹಾಗೂ ರೈತರಿಗೆ ಹಲವಾರು ವಿಧದಲ್ಲಿ ಸುಳ್ಳು ಮಾಹಿತಿ ವರದಿ ಸಲ್ಲಿಸಿ ವಂಚನೆ ಮಾಡುತ್ತಿದೆ. ಸರ್ಕಾರ ಕೂಡಲೇ ಈ ಬಗ್ಗೆ ಕೂಡಲೇ ದಕ್ಷ ಅಧಿಕಾರಿಗಳ ತಂಡ ರಚಿಸಿ ತನಿಖೆ ನಡೆಸಿ ಸಕ್ಕರೆ ಕಾರ್ಖಾನೆಯನ್ನು ಸರ್ಕಾರದ ವಶಕ್ಕೆ ಪಡೆದು ರೈತರಿಗೆ ನ್ಯಾಯ ಕೊಡಿಸಬೇಕು ಎಂದು ಅಗ್ರಹಿಸಿದರು.

ಸಹಕಾರಿ ವ್ಯವಸ್ಥೆಯಲ್ಲಿರುವ ಎಪಿಎಂಸಿ, ಸಹಕಾರಿ ಬ್ಯಾಂಕ್‌ಗಳು, ಹಾಲು ಉತ್ಪಾದಕರ ಸಂಸ್ಥೆಗಳ ಕಾರ್ಯನಿರ್ವಾಹಣೆಯಲ್ಲಿ ಸರ್ಕಾರದ ನಾಮನಿರ್ದೇಶನ ಪ್ರತಿನಿಧಿಗಳನ್ನು ನೇಮಕ ಮಾಡುವುದನ್ನು ಕೈ ಬಿಡಬೇಕು. ಸಂಸ್ಥೆಗಳು ದುರ್ಬಲವಾಗಲು ರಾಜಕೀಯ ಪ್ರವೇಶ ಕಾರಣವಾಗಿದೆ ಎಂಬುದನ್ನು ಸರ್ಕಾರ ಅರಿತುಕೊಳ್ಳಬೇಕು ಎಂದರು.

ಕರ್ನಾಟಕ ಜಲ ಸಂರಕ್ಷಣಾ ಸಮಿತಿ ವತಿಯಿಂದ ‘ಇಂದಿನ ಮಾಧ್ಯಮ ಹಾಗೂ ಪ್ರಜಾತಂತ್ರ ವ್ಯವಸ್ಥೆ’ ವಿಷಯದ ಕುರಿತು ಜ.24 ರಂದು ಬೆಂಗಳೂರಿನ ಶಾಸಕರ ಭವನದಲ್ಲಿ ವಿಚಾರಗೋಷ್ಠಿ ಹಮ್ಮಿಕೊಳ್ಳಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಅತ್ತಹಳ್ಳಿ ದೇವರಾಜ್, ಪಿ. ಸೂಮಶೇಖರ್, ಬರಡನಪುರ ನಾಗರಾಜ್, ಕಿರಗಸೂರ ಶಂಕರ, ರಂಗರಾಜು, ಮಾರ್ಬಳ್ಳಿ ನೀಲಕಂಠಪ್ಪ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net