ಕೃಷಿ, ಕಾರ್ಮಿಕ ನೂತನ ಕಾಯ್ದೆಗಳಿಗೆ ವಿರೋಧ ; ವಿವಿಧ ಸಂಘಟನೆಗಳ ಪ್ರತಿಭಟನಾ ಮೆರವಣಿಗೆ

9CBP4
Published on

ಚಿಕ್ಕಬಳ್ಳಾಪುರ : ನೂತನ ಕಾಯ್ದೆಗಳ ಜಾರಿ ವಿರೋಧಿಸಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಪ್ರತಿಭಟನೆ ಹಿನ್ನೆಲೆಯಲ್ಲಿ ಸಿಐಟಿಯು, ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಜಿಲ್ಲಾಕೇಂದ್ರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿತು.

ಜಿಲ್ಲಾ ಗ್ರಂಥಾಲಯದ ಆವರಣದಿಂದ ಹೊರಟು, ಶಿಡ್ಲಘಟ್ಟ ವೃತ್ತದ ಮೂಲಕ ಉಪ ವಿಭಾಗಾಧಿಕಾರಿಗಳ ಕಚೇರಿ ತಲುಪಿ ಧರಣಿ ಕುಳಿತರು, ಸರ್ಕಾರ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ತಹಸೀಲ್ದಾರ್ ಗಣಪತಿ ಶಾಸ್ತ್ರಿ ಮೂಲಕ ಪ್ರಧಾನಿಮಂತ್ರಿಗೆ ಮನವಿ ಸಲ್ಲಿಸಿದರು.

ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಖಾಸಗೀಕರಣ, ಪೆಟ್ರೋಲ್, ಡಿಸೇಲ್ ಮತ್ತು ಅಡುಗೆ ಅನಿಲ ಸಿಲಿಂಡರ್ ಬೆಲೆ ಹೆಚ್ಚಳ, ಕೃಷಿ, ವಿದ್ಯುತ್, ಕಾರ್ಮಿಕ ಮತ್ತು ಭೂ ಸುಧಾರಣೆ ಕಾಯ್ದೆ ಜನವಿರೋಧಿ ತಿದ್ದುಪಡಿಯೇ ಕೇಂದ್ರ ಬಿಜೆಪಿ ಸರ್ಕಾರದ ದೊಡ್ಡ ಸಾಧನೆಯಾಗಿದೆ ಎಂದು ಜಿಲ್ಲಾ ಪ್ರಾಂತ ರೈತ ಸಂಘದ ಅಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ ವ್ಯಂಗ್ಯವಾಡಿದರು.

ದೇಶದಲ್ಲಿ ಹಣ ದುಬ್ಬರ, ನಿರುದ್ಯೋಗ, ಆರ್ಥಿಕ ನಿರ್ವಹಣೆ ವೆಚ್ಚ ಹೆಚ್ಚಳದಿಂದ ಬಡ ಮತ್ತು ಮಧ್ಯಮ ವರ್ಗದ ಜನರು ದಿವಾಳಿಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಿರಂತರ ಹೋರಾಟ ನಡೆಸಲಾಗುತ್ತಿದ್ದು ಈಗಲಾದರೂ ಪ್ರಧಾನಿ ಎಚ್ಚೆತ್ತು ನೀತಿಗಳನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ನರಸಿಂಹಯ್ಯ, ವೆಂಕಟರಾಯಪ್ಪ, ವೆಂಕಟೇಶಮ್ಮ, ರಾಮಕೃಷ್ಣಪ್ಪ, ನ್ಯಾತಪ್ಪ, ಗೋಪಾಲ್ ಮತ್ತಿತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net