

ಬನ್ನೂರು: ರಾಜ್ಯದಲ್ಲಿ ಉತ್ತಮ ಮಳೆಯಿಂದ ಅಣೆಕಟ್ಟುಗಳು ತುಂಬಿ ರೈತರ ಮನಸ್ಸಿಗೆ ಮುದ ನೀಡಿದ್ದರೆ, ಅಧಿಕಾರಿಗಳು ಮಾತ್ರ ನಾಲೆ ಮತ್ತು ಕೆರೆಕಟ್ಟೆಗಳಿಗೆ ನೀರು ಹರಿಸದೆ ರೈತರನ್ನು ಶೋಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘದ ಮೂಲ ಸಂಘಟನೆಯ ಸದಸ್ಯರು ಸೋಮವಾರ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಪಟ್ಟಣದ ಸಂತೇಮಾಳದಲ್ಲಿ ರೈತರು ಜಮಾಯಿಸಿ, ಮೈಸೂರು, ಮಳವಳ್ಳಿ, ನರಸೀಪುರ, ಮಂಡ್ಯ ರಸ್ತೆಯ ವರ್ತುಲ ರಸ್ತೆಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ರೈತ ಸಂಘದ ಮೂಲ ಸಂಘಟನೆ ಅಧ್ಯಕ್ಷ ನಾರಾಯಣ ಮಾತನಾಡಿ, ಕೆರೆಕಟ್ಟೆಗಳಿಗೆ ನೀರು ತುಂಬಿಸುವಂತೆ ನೀರಾವರಿ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದರೂ ಕ್ರಮ ಕೈಗೊಳ್ಳದೆ ನಿರ್ಲಕ್ಷೃ ವಹಿಸಿದ್ದಾರೆ. ಇದರಿಂದ ವ್ಯವಸಾಯ ನಂಬಿ ಕುಳಿತ ರೈತರಿಗೆ ನಾಟಿ ಮಾಡಲು ಸಾಧ್ಯವಾಗಿಲ್ಲ. ಅಲ್ಲದೆ ನಾಲೆಗಳಲ್ಲಿ ಜೊಂಡು ಸೇರಿದಂತೆ ಕಸದ ರಾಶಿಯಿಂದ ನೀರು ಸಮರ್ಪಕವಾಗಿ ಕೊನೆ ಹಂತವನ್ನು ತಲುಪದೆ ರೈತರು ಪರಿತಪಿಸುವಂತಾಗಿದೆ. ವ್ಯವಸಾಯಕ್ಕೆ ನೀರು ಕೊಡಿ, ಇಲ್ಲ ವಿಷ ಕೊಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೆ ತಮಿಳುನಾಡಿಗೆ 150 ಟಿಎಂಸಿ ನೀರು ನೀಡುತ್ತಿದ್ದು, ನಮ್ಮ ವ್ಯವಸಾಯಕ್ಕೆ 500 ಕ್ಯೂಸೆಕ್ಸ್ ನೀರು ನೀಡಲು ಅಧಿಕಾರಿಗಳು ಯಾಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ಪ್ರಶ್ನಿಸಿದರು. ನಂತರ ಸ್ಥಳಕ್ಕೆ ಆಗಮಿಸಿದ ಕಾರ್ಯಪಾಲಕ ಅಭಿಯಂತರ ವಾಸುದೇವು ಮಾತನಾಡಿ, ಕೂಡಲೇ ನೀರು ಹರಿಸುವುದಾಗಿ ಭರವಸೆ ನೀಡಿದರು. ಕಾಲುವೆಯನ್ನು ಜೊಂಡು ತೆರವುಗೊಳಿಸುವ ಕಾರ್ಯ ಪ್ರಗತಿಯಲ್ಲಿದ್ದು, ಕೊನೆ ಹಂತದವರೆಗೂ ನೀರು ತಲುಪಲಿದೆ ಎಂದು ರೈತರಿಗೆ ಭರವಸೆ ನೀಡಿದ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆ ವಾಪಸ್ ಪಡೆದರು.
ರಂಗಸ್ವಾಮಿ, ಶಿವರಾಮು, ಲಿಂಗರಾಜು, ಪ್ರಕಾಶ್, ಕುಮಾರ್, ವೆಂಟಕರಂಗಶೆಟ್ಟಿ, ಚಿಕ್ಕಸ್ವಾಮಿ, ರಾಜಣ್ಣ, ರಾಜಕುಮಾರ, ನಾಗೇಶ್, ಪಾರ್ಥ, ಕೃಷ್ಣೇಗೌಡ ಇತರರು ಇದ್ದರು.