ಜನ, ಜಾನುವಾರು ಉಳಿಸಲು ನೀರು ಹರಿಸಿ: ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ

Farmers protest for water mandya
Published on

ಮಂಡ್ಯ: ಜಿಲ್ಲೆಯ ಜನ, ಜಾನುವಾರುಗಳನ್ನು ಉಳಿಸುವ ನಿಟ್ಟಿನಲ್ಲಿ ಕೃಷ್ಣರಾಜಸಾಗರ ಅಣೆಕಟ್ಟೆಯಿಂದ ಕೂಡಲೇ ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯಿಂದ ನಡೆಸುತ್ತಿರುವ ಪ್ರತಿ ಸೋಮವಾರದ ಪ್ರತಿಭಟನೆ 14ನೇ ವಾರವೂ ಮುಂದುವರೆಯಿತು.

ನಗರದ ಸರ್‌ಎಂ.ವಿ.ಪ್ರತಿಮೆ ಎದುರು ಪ್ರತಿಭಟನೆ ನಡೆಸಿ ನೀರು ಹರಿಸುವಂತೆ ಒತ್ತಾಯಿಸಿ ಘೋಷಣೆ ಕೂಗಲಾಯಿತು. ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಮಾತನಾಡಿ, ಜನ ಮತ್ತು ಜಾನುವಾರುಗಳ ಉಳಿವಿಗೆ ಈಗಲಾದರೂ ಜಿಲ್ಲೆಯ ಎಲ್ಲ ನಾಲೆಗಳಿಗೂ ನೀರು ಹರಿಸಬೇಕು. ಕಳೆದ ಒಂಭತ್ತು ತಿಂಗಳಿಂದ ಕಾವೇರಿ ನೀರಿನ ವಿಷಯವಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ರಸ್ತೆ ಸಂಚಾರ ತಡೆ, ರೈಲು ತಡೆ ಹಾಗೂ ಬಂದ್‌ಗಳನ್ನು ಯಶಸ್ವಿಯಾಗಿ ನಡೆಸಿದ್ದೇವೆ. ಆದರೂ ರಾಜ್ಯ ಮತ್ತು ಕೇಂದ್ರ ಸರ್ಕಾರವು ದಪ್ಪ ಚರ್ಮದ ರೀತಿ ವರ್ತಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ವಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಇದರ ಮುಂದೆ ಕರ್ನಾಟಕ ಸರ್ಕಾರದ ಅಧಿಕಾರಿಗಳು ಯಾವುದೇ ಕಾರಣಕ್ಕೂ ನೀರನ್ನು ಬಿಡುವುದಿಲ್ಲ ಎಂಬ ಅಭಿಪ್ರಾಯವನ್ನು ತಿಳಿಸಿರುವುದು ಸ್ವಾಗತಾರ್ಹ. ಪ್ರಾಧಿಕಾರದ ಅಧಿಕಾರಿಯೂ ಸಹ ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರು ಬಿಡುವುದಿಲ್ಲ ಎಂಬುದನ್ನು ಹೇಳಿದ್ದಾರೆ. ಕಳೆದ ಎರಡು ತಿಂಗಳ ಎರಡೂವರೆ ಟಿಎಂಸಿ ನೀರನ್ನು ಬಿಡಲೇಬೇಕು ಎಂಬುವ ತನ್ನ ಹಠದ ಸ್ವಭಾವವನ್ನು ತಮಿಳುನಾಡು ಸರ್ಕಾರ ಹೇಳಿದೆ. ಇಲ್ಲಿ ಗಮನ ಹರಿಸಬೇಕಿರುವುದೆಂದರೆ ನೀರು ನಮ್ಮಲ್ಲಿ ಇದ್ದಾಗ ಹರಿಸಿದ್ದಾಗಿದೆ. ನೀರು ಇಲ್ಲದೇ ಇರುವಾಗ ಮೂರು ನಾಲ್ಕು ತಿಂಗಳ ನಂತರ ಈ ಅಭಿಪ್ರಾಯ ವ್ಯಕ್ತವಾಗಿದೆ. ಹಾಗಾಗಿ ಸಕಾಲದಲ್ಲಿ ನೀರು ಸಂರಕ್ಷಣೆ ಮಾಡುವಲ್ಲಿ ಸರ್ಕಾರ ವಿಫಲವಾಗಿರುವುದು ಕಾಣಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ರೈತರು ಬೆಳೆ ಬೆಳೆಯುವುದಕ್ಕೆ ಮೂರ್ನಾಲ್ಕು ವರ್ಷದಿಂದಲೂ ಸಾಧ್ಯವಾಗಿಲ್ಲ. ಸರ್ಕಾರ ಈಗಲೂ ಕೂಡ ಇರುವ ನೀರನ್ನು ಉಳಿಸಿಕೊಂಡು ಜಿಲ್ಲೆಯ ಎಲ್ಲ ನಾಲೆಗಳಿಗೆ ನೀರು ಹರಿಸಬೇಕು. ಗಂಭೀರವಾಗಿ ನೀರಿನ ವಿಚಾರದಲ್ಲಿ ಸಭೆ ನಡೆಸಿ, ವಾಸ್ತವವನ್ನು ಅರಿತುಕೊಳ್ಳಬೇಕು. ರಾಜಕೀಯ ದ್ವೇಷ ಬಿಟ್ಟು ನೀರಿನ ಉಳಿವಿಗೆ ಕೈ ಜೋಡಿಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ, ಬಸವೇಗೌಡ, ಜಯರಾಂ, ವಿವಿಧ ಸಂಘಟನೆಯ ಮುಖಂಡರಾದ ನಾರಾಯಣಸ್ವಾಮಿ, ತುಳಸೀಧರ್, ಸತ್ಯಭಾಮಾ, ತಾಯಮ್ಮ, ನಾಗೇಂದ್ರ ಪಣಕನಹಳ್ಳಿ, ದೇವೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net