ಬೆಳೆ ನಷ್ಟಕ್ಕೆ ಪರಿಹಾರ ಕೊಡದ ರಾಜ್ಯಸರ್ಕಾರ: ನಗರದಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಪ್ರತಿಭಟನೆ

Farmers protest for crop loss compensation mandya
Published on

ಮಂಡ್ಯ: ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯಕ್ಕಾದ ಅನ್ಯಾಯ ಹಾಗೂ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡದ ರಾಜ್ಯ ಸರ್ಕಾರದ ನಗರದಲ್ಲಿ ಸೋಮವಾರ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು.

ಸರ್‌ಎಂವಿ ಪ್ರತಿಮೆ ಎದುರು 15ನೇ ಸೋಮವಾರದ ಧರಣಿ ನಡೆಸಿ ಸದಸ್ಯರು, ರಾಜ್ಯ ಹಾಗೂ ಕೇಂದ್ರದ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಈ ವೇಳೆ ಮಾತನಾಡಿದ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ, ರಾಜ್ಯ ಸರ್ಕಾರ ರೈತರಿಗಾಗಿರುವ ನಷ್ಟವನ್ನು ಪರಿಣಾಮಕಾರಿಯಾಗಿ ಭರಿಸಿಕೊಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಕಾವೇರಿ ನೀರಿನ ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯದ ಕುರಿತು ನಾವು ನಿರಂತರ ಧರಣಿ, ಉಪವಾಸ ಸತ್ಯಾಗ್ರಹ, ರಸ್ತೆ ತಡೆ ಸೇರಿದಂತೆ ಹೋರಾಟ ನಡೆಸಿಕೊಂಡು ರಾಜ್ಯ ಸರ್ಕಾರದ ಗಮನ ಸೆಳೆದರೂ ಕೂಡ ಆಳುವವರು ದಿವ್ಯ ನಿರ್ಲಕ್ಷೃ ತೋರಿದ್ದಾರೆ ಎಂದು ತೀವ್ರವಾಗಿ ಖಂಡಿಸಿದರು.

ಕೆಆರ್‌ಎಸ್ ಜಲಾಶಯದಲ್ಲಿ ತಮಿಳುನಾಡಿಗೆಂದೇ ನೀರನ್ನು ಸಂಗ್ರಹಿಸಿ ಅವರು ಕೇಳಿದಾಗ ಕದ್ದು ಮುಚ್ಚಿ ನೀರು ಬಿಡುವ ರಾಜ್ಯಸರ್ಕಾರದ ನಡೆ ಖಂಡನೀಯ. ಅತ್ಯಂತ ಸಂಕಷ್ಟ ಪರಿಸ್ಥಿತಿಯಲ್ಲಿರುವ ಜಿಲ್ಲೆಯ ರೈತರ ಬೆಳೆಗಳಿಗೆ ನೀರು ಬಿಡಿ ಎಂದು ಸಾಕಷ್ಟು ಮನವಿ ಮಾಡಿದರೂ, ನಾಲೆಗಳ ಮೂಲಕ ನೀರು ಹರಿಸದೆ ರೈತರ ಬೆಳೆಯನ್ನು ನಾಶ ಮಾಡಲಾಗಿದೆ. ಸರ್ಕಾರದ ಈ ಧೋರಣೆಯನ್ನು ಖಂಡಿಸುತ್ತೇವೆ. ಕಳೆದ ಸಾಲಿನ ಬೆಳೆ ನಷ್ಟ, ಈಗ ಆಗಿರುವ ಬೆಳೆ ನಷ್ಟ ಮತ್ತು ಮುಂದೆ ಬೆಳೆ ಮಾಡಲಾಗಿರುವ ನಷ್ಟಕ್ಕೂ ಸರ್ಕಾರ ಸೂಕ್ತ ಪರಿಹಾರ ಕೊಡಬೇಕಿದೆ. ಜಿಲ್ಲಾ ಉಸ್ತುವಾರಿ ಸಚಿವರು ಜವಾಬ್ದಾರಿ ಹೊತ್ತು ಮಾತನಾಡಬೇಕಿದೆ. ಇದು ಬದುಕಿನ ಪ್ರಶ್ನೆ ಎಂಬುದನ್ನು ಸಚಿವರು ಮರೆಯಬಾರದು ಎಂದು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ಸಮಿತಿಯ ಕೆ.ಬೋರಯ್ಯ, ಇಂಡುವಾಳು ಚಂದ್ರಶೇಖರ್, ಕೆ.ಸುಧೀರ್, ಕೃಷ್ಣಪ್ರಕಾಶ್, ಮುದ್ದೇಗೌಡ, ಕರವೇ ಕೆ.ಟಿ.ಶಂಕರೇಗೌಡ, ಎಸ್.ನಾರಾಯಣ್, ಬೋರಲಿಂಗೇಗೌಡ, ನಾರಾಯಣಸ್ವಾಮಿ, ಕನ್ನಡ ಸೇನೆ ಮಂಜುನಾಥ್, ಎ.ಎಲ್.ಬಸವೇಗೌಡ, ಇಂಡುವಾಳು ಬಸವರಾಜು, ಎಂ.ಎಲ್.ತುಳಸೀಧರ್, ಫಯಾಜ್, ಮಹೇಶ್ ಇತರರಿದ್ದರು.

ಸಮಿತಿಯ ಹೋರಾಟ ಬೆಂಬಲಿಸಿ ಕರವೇ, ದಸಂಸ, ಎಸ್ಸಿ, ಎಸ್ಟಿ ನೌಕರರ ಸಂಘ, ಜಯ ಕರ್ನಾಟಕ ಪರಿಷತ್, ಮಹಿಳಾ ಸಂಘಟನೆ, ಮಂಡ್ಯ ವಿಶ್ವವಿದ್ಯಾನಿಲಯ ವಿದ್ಯಾರ್ಥಿನಿಯರು ಪಾಲ್ಗೊಂಡು ಬಸ್ ಪ್ರಯಾಣಿಕರಿಗೆ ಕರಪತ್ರ ವಿತರಿಸುವ ಮೂಲಕ ಬೆಂಬಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net