ತಕ್ಷಣವೇ ಟೋಲ್ ಸಂಗ್ರಹ ನಿಲ್ಲಿಸಲಿ: ಭೂಮಿ ತಾಯಿ ಹೋರಾಟ ಸಮಿತಿ ಪ್ರತಿಭಟನೆ

Farmers protest demanding to stop toll collection Mandya
Published on

ಮಂಡ್ಯ: ವಿಶ್ವವಿಖ್ಯಾತ ಕೃಷ್ಣರಾಜಸಾಗರ ಅಣೆಕಟ್ಟೆ ಸಮೀಪ ನಿರ್ಮಾಣವಾಗಿರುವ ಕೆಳಸೇತುವೆಯಲ್ಲಿ ಟೋಲ್ ಸಂಗ್ರಹ ನಿಲ್ಲಿಸುವಂತೆ ಆಗ್ರಹಿಸಿ ಭೂಮಿ ತಾಯಿ ಹೋರಾಟ ಸಮಿತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಕಾವೇರಿ ನೀರಾವರಿ ನಿಗಮದ ಕಚೇರಿ ಎದುರು ಧರಣಿ ನಡೆಸಿದ ಸಮಿತಿ ಕಾರ್ಯಕರ್ತರು, ರಾಜ್ಯಸರ್ಕಾರ ಹಾಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ವಿರುದ್ಧ ಘೋಷಣೆ ಮೊಳಗಿಸಿದರು. ರೈತ ನಾಯಕ ಕೆ.ಎಸ್.ನಂಜುಂಡೇಗೌಡ ಮಾತನಾಡಿ, 2002ರಲ್ಲಿ 17 ಕೋಟಿ ರೂ ವೆಚ್ಚದಲ್ಲಿ ಕೆಳಸೇತುವೆ ನಿರ್ಮಾಣ ಮಾಡಲಾಗಿದೆ. ಈವರೆಗೆ ಟೋಲ್‌ನಲ್ಲಿ ಅಂದಾಜು 20 ಕೋಟಿ ರೂನಷ್ಟು ಹಣ ಸಂಗ್ರಹಿಸಲಾಗಿದೆ. ಆದಾಗ್ಯೂ ಸುಂಕ ವಸೂಲಾತಿ ನಿಲ್ಲಿಸಿಲ್ಲ. ಇದನ್ನು ಸರಿಪಡಿಸಬೇಕಾದ ಜನಪ್ರತಿನಿಧಿಗಳು ಎಲ್ಲಿದ್ದಾರೆಂದು ಪ್ರಶ್ನಿಸಿದರು.

ಪ್ರತಿದಿನ ಅಂದಾಜು 5 ಲಕ್ಷ ರೂ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಖರ್ಚು ಮಾಡಿದ ವೆಚ್ಚ ಸಂಗ್ರಹವಾದರೂ ಯಾವ ಕಾರಣಕ್ಕೆ ಸುಂಕ ವಸೂಲಾತಿ ಮಾಡುತ್ತಿದ್ದಾರೆ. ಬಹುಶಃ ಟೋಲ್ ನಿರ್ವಹಣೆ ಮಾಡುತ್ತಿರುವವರು ಜನಪ್ರತಿನಿಧಿಗಳ ಸಂಬಂಧಿಕರಿರಬೇಕು. ಆ ಕಾರಣಕ್ಕೆ ವಸೂಲಾತಿ ಮುಂದುವರೆಯುತ್ತಿದೆ. ಈಗಾಗಲೇ ವೆಚ್ಚದ ಹಣ ವಸೂಲಾಗಿರುವುದರಿಂದ ಟೋಲ್ ಸಂಗ್ರಹಿಸುವುದನ್ನು ನಿಲ್ಲಿಸುವಂತೆ 2023ರಲ್ಲಿ ನಿಗಮದ ಅಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಆದರೂ ಸ್ಪಂದನೆ ಸಿಕ್ಕಿಲ್ಲ. ಇದರು ರಾಜ್ಯಸರ್ಕಾರದ ರೈತ ವಿರೋಧಿ ನೀತಿ ತೋರಿಸುತ್ತಿದೆ ಎಂದು ಆರೋಪಿಸಿದರು.

ಪ್ರಜಾತಂತ್ರ ವ್ಯವಸ್ಥೆ ಜನರಿಂದ, ಜನರಿಗಾಗಿ, ಜನರಿಗೋಸ್ಕರ ನಡೆಯಬೇಕು. ಆದರೆ ರಾಜ್ಯಸರ್ಕಾರದ ದುರಾಡಳಿತ ನೋಡಿದರೆ ಜನರಿಂದ ಕಾಂಗ್ರೆಸ್‌ಗಾಗಿ ಹಾಗೂ ರಾಹುಲ್‌ಗಾಂಧಿಗೋಸ್ಕರ ಇರಬಹುದು. ರೈತರು ಹಾಗೂ ಸಾರ್ವಜನಿಕರಿಂದ ಹಣ ವಸೂಲಿ ಮಾಡಿ ಅದನ್ನು ರಾಹುಲ್‌ಗಾಂಧಿಗೆ ಕಪ್ಪ ಒಪ್ಪಿಸುತ್ತಿರಬಹುದು. ಇದು ಕೊನೆಯ ಎಚ್ಚರಿಕೆ. ಶೀಘ್ರದಲ್ಲಿಯೇ ಟೋಲ್ ಸಂಗ್ರಹ ನಿಲ್ಲಿಸಬೇಕು. ಇಲ್ಲದಿದ್ದರೆ ಕಾನೂನು ಬಾಹಿರವಾಗಿ ನಡೆಯುತ್ತಿರುವ ಟೋಲ್ ಅನ್ನೇ ಕಿತ್ತಾಕುತ್ತೇವೆ. ಅಂತೆಯೇ ಶಾಸಕರು, ಸಚಿವರು ದುರಂಹಕಾರ ಬಿಟ್ಟು ಕಾನೂನು ವ್ಯವಸ್ಥೆಯಲ್ಲಿ ಕೆಲಸ ಮಾಡಿದ್ದರೆ ಬೀದಿ ಬೀದಿಯಲ್ಲಿ ೇರಾವ್ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಭೂಮಿ ತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಸಿ.ಕೃಷ್ಣೇಗೌಡ, ಕಾರ್ಯದರ್ಶಿ ಎಂ.ವಿ.ಕೃಷ್ಣ, ಖಜಾಂಚಿ ಮಹದೇವು, ದರ್ಶನ್, ಹನಿಯಂಬಾಡಿ ನಾಗರಾಜು, ಸಿದ್ದಪ್ಪ, ತಿಮ್ಮೇಗೌಡ, ಮಹೇಶ್, ಪರಮೇಶ್, ಜಗದೀಶ್, ಸುರೇಶ್, ರಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net