

ರಾಯಚೂರು ಇತ್ತಿಚ್ಚಿಗೆ ಸುರಿದ ಮಳೆಯಿಂದ ರೈತರ ಬೆಳೆ ಹಾನಿಯಾಗಿದ್ದು ಕೂಡಲೇ ಸರ್ಕಾರ ಸೂಕ್ತ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಗುರುವಾರ ನಗರದ ಮಹಾನಗರ ಪಾಲಿಕೆ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ಮಾಡಿದರು.
ಜಿಲ್ಲೆಯಲ್ಲಿ ಸತತವಾಗಿ ಸುರಿದ ಮಳೆಗೆ ಹತ್ತಿ, ತೊಗರಿ, ಸಜ್ಜೆ ಮತ್ತು ಮೆಣಸಿನಕಾಯಿ ಸೇರಿದಂತೆ ಇತರೆ ಬೆಳೆಗಳು ಶೇ. 50 ರಷ್ಟು ನಷ್ಟವಾಗಿದೆ ಮತ್ತು ಗ್ರಾಮೀಣ ಭಾಗದಲ್ಲಿ ಸಾಕಷ್ಟು ರಸ್ತೆಗಳು ಹಾಳಾಗಿದ್ದು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು. ಕಳೆದ 3 ವರ್ಷಗಳಿಂದ ಮೆಣಸಿನಕಾಯಿ ಮತ್ತು ಹತ್ತಿ ಬೆಳೆದ ರೈತರು ಬೆಲೆ ಇಲ್ಲದೆ ನಷ್ಟದಲ್ಲಿದ್ದು, ಹತ್ತಿಗೆ 10 ಸಾವಿರ ರೂ. ಮೆಣಸಿನಕಾಯಿಗೆ 15 ಸಾವಿರ ರೂ. ಬೆಂಬಲ ಬೆಲೆಯೊಂದಿಗೆ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಖರೀದಿ ಕೇಂದ್ರದ ಮೂಲಕ ಖರೀದಿ ಮಾಡಬೇಕು ಮತ್ತು ಇನ್ನುಳಿದ ಬೆಳೆಗಳಾದ ಭತ್ತ,ಜೋಳಕ್ಕೆ 3500 ರೂ. ದರ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.
ತುಂಗಭದ್ರ ಎಡದಂಡೆ ನಾಲೆಯ ಎಲ್ಲಾ ಕ್ರಸ್ಟ್ ಗೇಟ್‌ಗಳನ್ನು ಕೂಡಿಸಲು ಈ ವರ್ಷದ ಬೇಸಿಗೆ ಬೆಳೆಗೆ ಯಾವುದೇ ಧಕ್ಕೆ ಆಗದಂತೆ ಮುಂಜಾಗ್ರತಾ ಕ್ರಮವಹಿಸಿ ಗೇಟ್ ಗಳನ್ನು ಅಳವಡಿಸಬೇಕು, ಮತ್ತು ಆಕ್ರಮ ನೀರಾವರಿ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು, ನಾರಾಯಣಪುರ ಬಲದಂಡೆ ನಾಲೆಯ ಆಧುನೀಕರಣ ಕಾಮಗಾರಿಯಲ್ಲಿ ಭಾರಿ ಭಷ್ಟಾಚಾರ ನಡೆದಿದ್ದು ಸೂಕ್ತ ತನಿಖೆಗೆ ಆದೇಶ ನೀಡಬೇಕು ಮತ್ತು ಅರೆ ಬರೆ ಮಾಡಿದ ಕೆಲಸ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಸೂಗುರಯ್ಯ, ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್, ರಾಜ್ಯ ಸಂಘಟನಾ ಕಾರ್ಯದರ್ಶಿ ವೆಂಕಪ್ಪ ಕಾರಬಾರಿ, ಜಿಲ್ಲಾ ಕಾರ್ಯಾಧ್ಯಕ್ಷ ಬಸವರಾಜ ಮಾಲೀ ಪಾಟೀಲ್, ಲಿಂಗಾರೆಡ್ಡಿ ಪಾಟೀಲ್, ಬೂದಯ್ಯಸ್ವಾಮಿ , ಸಿದ್ದಯ್ಯ ಸ್ವಾಮಿ, ಹೆಚ್.ಶಂಕ್ರಪ್ಪಗೌಡ, ಮಲ್ಲಣ್ಣಗೌಡ, ಎ.ಗೋವಿಂದ ನಾಯಕ, ಬಸವರಾಜ ನವಲಕಲ್, ವೀರೇಶ, ಸೇರಿದಂತೆ ಅನೆಕರು ಇದ್ದರು.