ಕಾಡಾನೆ ಹಾವಳಿ ತಡೆಗೆ ಆಗ್ರಹಿಸಿ ರೈತರ ಪ್ರತಿಭಟನೆ

29 SARAG 1
ಸರಗೂರು ತಾಲೂಕಿನ ಮೊಳೆಯೂರು ವಲಯದ ಕಚೇರಿ ಮುಂಭಾಗದಲ್ಲಿ ಕಂದಲಿಕೆ ಹೋಬಳಿಯ ರೈತರು ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿದರು.
Published on

ಸರಗೂರು: ತಾಲೂಕಿನ ಕಂದಲಿಕೆ ಹೋಬಳಿ ವ್ಯಾಪ್ತಿಯ ಭಾಗದಲ್ಲಿ ಕಾಡಾನೆ ಹಾವಳಿ ತಪ್ಪಿಸಬೇಕು ಹಾಗೂ ಆನೆ ಕಾರಿಡಾರ್ ನಿರ್ಮಿಸುವ ಮೂಲಕ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಕಂದಲಿಕೆ ಹೋಬಳಿ ವಿವಿಧ ಗ್ರಾಮದ ಮುಖಂಡರ ನೇತೃತ್ವದಲ್ಲಿ ರೈತರು ಅರಣ್ಯ ಇಲಾಖೆಯ ಮೊಳೆಯೂರು ವಲಯದ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಕಚೇರಿ ಮುಂಭಾಗದಲ್ಲಿ ಜಮಾಯಿಸಿದ ಪ್ರತಿಭಟನಾನಿರತರು ಅರಣ್ಯ ಇಲಾಖೆ ವಿರುದ್ಧ ಘೋಷಣೆಗಳನ್ನು ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.

ಕಾಟವಾಳು, ತೆಲಗುಮಸಹಳ್ಳಿ, ಪುರದಶಡ್ಡು, ಮಠದಕಟ್ಟೆ, ದಡದಹಳ್ಳಿ, ಮುತ್ತಿಗೆಹುಂಡಿ, ಹೆಗ್ಗುನೂರು, ದೇವಲಾಪುರ, ಬಾಡಗ ಇನ್ನೂ ಹಲವು ಗ್ರಾಮಗಳಲ್ಲಿ ಆನೆಗಳ ಉಪಟಳ ಹೆಚ್ಚಾಗಿದ್ದು, ಬೆಳೆ ಹಾನಿ ಮಾಡುತ್ತಿವೆ. ಹಗಲಿನಲ್ಲಿಯೂ ಜಮೀನುಗಳ ಬಳಿ ಹೋಗಲು ರೈತರು ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಕೆಲವರು ಜಮೀನುಗಳಲ್ಲಿ ಬೆಳೆ ಬೆಳೆಯುವುದನ್ನೇಕೈ ಬಿಟ್ಟಿದ್ದಾರೆ ಎಂದು ಅಳಲು ತೋಡಿಕೊಂಡರು.

ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಸಿ.ಕೆ.ಗಿರೀಶ್ ಮಾತನಾಡಿ, ಕಾಡು ಪ್ರಾಣಿಗಳ ಹಾವಳಿಯನ್ನು ಶಾಶ್ವತವಾಗಿ ತಡೆಯಲು ಕ್ರಮ ಕೈಗೊಳ್ಳಬೇಕು. ಪ್ರಾಣ ಹಾನಿಗೆ ಕಾರಣವಾಗಿರುವ ಆನೆಗಳನ್ನು ಸೆರೆ ಹಿಡಿಯಬೇಕು. ಕಂದಲಿಕೆ ಹೋಬಳಿ ಕಾಡಂಚಿನ ಭಾಗದಲ್ಲಿ ಆನೆ ಕಾರಿಡಾರ್ ನಿರ್ಮಿಸುವ ಮೂಲಕ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.

ಆನೆ ಹಾವಳಿಯಿಂದ ಪ್ರಾಣ ಕಳೆದುಕೊಂಡ ರೈತರ ಕುಟುಂಬಗಳಿಗೆ ಇದುವರೆಗೂ ಪರಿಹಾರ ಒದಗಿಸಿಲ್ಲ. ಬೆಳೆಹಾನಿ ಸಂಬಂಧ ಅರಣ್ಯ ಇಲಾಖೆ ಕೋಟ್ಯಂತರ ರೂ. ಪರಿಹಾರ ಬಾಕಿ ಉಳಿದಿದೆ. ಅಗತ್ಯ ದಾಖಲೆಗಳೊಂದಿಗೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದರೂ ಇದುವರೆಗೆ ಪರಿಹಾರ ವಿತರಣೆ ಮಾಡಿಲ್ಲ. ಆದ್ದರಿಂದ ಸರ್ಕಾರ ಕೂಡಲೇ ಕ್ರಮ ವಹಿಸುವಂತೆ ಅರಣ್ಯ ಇಲಾಖೆಗೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.

ಬಸವ ಬಳಗದ ಅಧ್ಯಕ್ಷ ಹಂಚೀಪುರ ಗಣಪತಿ ಮಾತನಾಡಿ, ಕಾಡಾನೆಗಳು ನಾಡಿಗೆ ಬರಲು ಅರಣ್ಯ ಇಲಾಖೆಯೇ ಕಾರಣ. ರಿಯಲ್ ಎಸ್ಟೇಟ್ ಉದ್ಯಮಿಗಳು, ಕೈಗಾರಿಕೋದ್ಯಮಿಗಳು ಹಾಗೂ ಪ್ರಭಾವಿಗಳು ಅರಣ್ಯ ಒತ್ತುವರಿ ಮಾಡಿಕೊಂಡಿದ್ದರೂ ಅರಣ್ಯ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಇದರಿಂದ ಜನರು ಹಾಗೂ ಜಾನುವಾರುಗಳಿಗೆ ತೊಂದರೆ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಡಿಸಿದರು.

ಮನವಿ ಸ್ವೀಕರಿಸಿ ಮಾತನಾಡಿ ಎಸಿಎಫ್ ಸತೀಶ್, ಕಾಡಾನೆ ಹಾವಳಿ ತಡೆಗೆ ಶಾಶ್ವತ ಪರಿಹಾರ ಕಲ್ಪಿಸುವ ಸಂಬಂಧ ಅರಣ್ಯ ಸಚಿವ ಮತ್ತು ಉಸ್ತುವಾರಿ ಸಚಿವರ ಜತೆ ಚರ್ಚಿಸಲಾಗುವುದು. ಹದಿನೈದು ದಿನ ಕಾಲಾವಕಾಶ ನೀಡಬೇಕು. ಈ ಭಾಗದ ರೈತರು ಸಭೆ ನಡೆಸಿ ಕುಂದುಕೊರತೆಗಳ ಪರಿಹರಿಸಲು ಮುಂದಾಗುತ್ತೇವೆ ಎಂದು ಭರವಸೆ ನೀಡಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ವೀರಭದ್ರಪ್ಪ, ದಡದಹಳ್ಳಿ ಶಿವರಾಜಪ್ಪ, ಗ್ರಾಮೀಣ ಮಹೇಶ್, ಗ್ರಾಪಂ ಅಧ್ಯಕ್ಷ ಮುತ್ತುರಾಜ್, ಲೋಕೇಶ್, ಸದಸ್ಯರಾದ ಟಿ.ಬಸವರಾಜು, ಹರಿದಾಸ್, ದೇವದಾಸ್, ವಸಂತಕುಮಾರ್,ಸಿದ್ದಪ್ಪ, ಡಿ.ಪಿ.ನಟರಾಜು, ಕೆ.ಪಿ.ಮಹದೇವಪ್ಪ, ಮುಖಂಡರು, ವಿವಿಧ ಗ್ರಾಮಗಳ ರೈತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net