

ಹರಿಹರ: ಸರ್ಕಾರ ರೈತರ ಕೃಷಿ ಪಂಪ್‌ಸೆಟ್‌ಗೆ ವಿದ್ಯುತ್ ಸರಬರಾಜು ಸಮಯ ಕಡಿತಗೊಳಿಸಿರುವುದನ್ನು ವಿರೋಧಿಸಿ ರೈತರು ತಾಲೂಕಿನ ಕುರುಬರಹಳ್ಳಿ ಸಮೀಪ ರಾಜ್ಯ ಹೆದ್ದಾರಿ ತಡೆದು ಬುಧವಾರ ಪ್ರತಿಭಟಿಸಿದರು.
ತಾಲೂಕಿನ ಕುರುಬರಹಳ್ಳಿ ಸಮೀಪದಲ್ಲಿ ಬೆಳಗ್ಗೆ ರಾಜ್ಯ ಹೆದ್ದಾರಿ ತಡೆದ ರೈತರು ತಮ್ಮ ಬೇಡಿಕೆ ಈಡೇರುವವರೆಗೂ ರಸ್ತೆ ತೆರವು ಮಾಡುವುದಿಲ್ಲ. ಬೆಸ್ಕಾಂ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ರೈತರಿಗೆ ಸಮರ್ಪಕ ವಿದ್ಯುತ್ ಸರಬರಾಜು ನೀಡುವ ಭರವಸೆ ನೀಡುವವರೆಗೂ ಈ ಹೋರಾಟ ಮುಂದುವರಿಯುತ್ತದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತರು, ಕಳೆದ ಒಂದು ತಿಂಗಳಿಂದ ಬೆಸ್ಕಾಂ ಇಲಾಖೆ ರೈತರ ಜೀವನದಲ್ಲಿ ಆಟವಾಡುತ್ತಿದೆ. ಈ ವಷರ್ ಮಳೆ ಪ್ರಮಾಣ ಕಡಿಮೆಯಾಗಿ ಬೆಳೆ ನಾಶವಾಗಿದೆ. ರೈತರು ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ ಎಂದರು.
ಇಂತಹ ಪರಿಸ್ಥಿತಿಯಲ್ಲಿಯೂ ಸರ್ಕಾರ ರೈತರಿಗೆ ನೀಡುವ ವಿದ್ಯುತ್ ಸಮಯ ದಿನದಿಂದ ದಿನಕ್ಕೆ ಕಡಿಮೆ ಮಾಡುತ್ತಿದ್ದು, ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಆಡಳಿತ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರಿಗೆ ಈ ಹಿಂದೆ ನೀಡುತ್ತಿದ್ದ ಸತತ ಏಳು ಗಂಟೆಗಳ ವಿದ್ಯುತ್ ಪೂರೈಕೆ ಯಥಾವತ್ತಾಗಿ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ರೈತರಿಗೆ ಬೇರೆ ರಾಜ್ಯಗಳಿಂದ ವಿದ್ಯುತ್ ಖರೀದಿಸಿ ಉಚಿತ ವಿದ್ಯುತ್ ನೀಡುತ್ತಿದ್ದರು. ಅದೇ ರೀತಿ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ವಿದ್ಯುತ್ ಅಭಾವವಿದ್ದರೆ ಬೇರೆ ರಾಜ್ಯಗಳಿಂದ ವಿದ್ಯುತ್ ಖರೀದಿ ಮಾಡಿ ನೀಡಲಿ ಎಂದು ಒತ್ತಾಯಿಸಿದರು.
ಚಿಕ್ಕಬಿದರಿ, ಸಾರಥಿ, ಕರಲಹಳ್ಳಿ, ಕೊಂಡಜ್ಜಿ, ಕೆಂಚನಹಳ್ಳಿ, ಕುರುಬರಹಳ್ಳಿ, ಹೊಟ್ಟಿಗೆನಹಳ್ಳಿ ಸೇರಿದಂತೆ ಇತರೆ ಹಳ್ಳಿಯಿಂದ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.
ಬೆಳಗ್ಗೆ 10 ಗಂಟೆಯಿಂದಲೇ ರೈತರು ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸುತ್ತಿದ್ದರೂ ಸ್ಥಳಕ್ಕೆ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಬರದಿದ್ದರಿಂದ ಪ್ರತಿಭಟನಾಕಾರರು ಇನ್ನಷ್ಟು ಉಗ್ರ ಹೋರಾಟಕ್ಕೆ ಮುಂದಾದರು.
ಕೆಂಚನಹಳ್ಳಿ ಪರಮೇಶ್, ಕೊಂಡಜ್ಜಿ ಕುಮಾರ್, ವಿಜಯ್ ಕುಮಾರ್ ಕುರುಬರಹಳ್ಳಿ ರಾಜೇಶ್, ಗಂಗನರಸಿ ಕುಮಾರ್, ಗೌಡ್ರು ಉಮೇಶ್, ಗೌಡ್ರು ಬಸವರಾಜ್, ಪ್ರಭುದೇವ್, ಮಲ್ಲಪ್ಪ, ರಾಘವೇದ್ರ, ನಾಗೇಂದ್ರಪ್ಪ, ಕರಿಬಸಪ್ಪ, ಮಹದೇವಪ್ಪ, ಪ್ರದೀಪ್, ಪ್ರಜ್ವಲ್ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ರೈತರಿದ್ದರು.
ಪರದಾಡಿದ ಸವಾರರು, ಪ್ರಯಾಣಿಕರು
ಸತತ 4ರಿಂದ 5 ಗಂಟೆಗಳ ಕಾಲ ರಸ್ತೆ ತಡೆದು ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ ಹೊಸಪೇಟೆಯಿಂದ ಹರಿಹರಕ್ಕೆ ಬರುವ ವಾಹನಗಳು ಹಾಗೂ ಹರಿಹರದಿಂದ ಹೊಸಪೇಟೆ ಕಡೆಗೆ ಹೋಗುವ ವಾಹನಗಳು ಸುಮಾರು ಐದಾರೂ ಕಿಲೋಮೀಟರ್ ಉದ್ದದವರೆಗೆ ಸಾಲುಗಟ್ಟಿ ನಿಂತಿದ್ದವು. ಪ್ರಯಾಣಿಕರು, ವಾಹನ ಸವಾರರು ಪರದಾಡಿದ್ದಲ್ಲದೇ, ಬಿರುಬಿಸಿಲಿನಿಂದ ಬೇಸತ್ತರು. ಕೋಟ್..
ಬಿಟ್ಟಿ ಭಾಗ್ಯ ನಾವು ಕೇಳಿಲ್ಲ
ಸರ್ಕಾರಕ್ಕೆ ಬಿಟ್ಟಿ ಭಾಗ್ಯ ನೀಡಿ ಎಂದು ಯಾರು ಸಹ ಕೇಳಿರಲಿಲ್ಲ. ನಿಮ್ಮ ಭಾಗ್ಯ ಮತ್ತು ಗ್ಯಾರಂಟಿ ನೀವೇ ಇಟ್ಟುಕೊಳ್ಳಿ. ನಮಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಿ. ಬೇಕಿದ್ದರೆ ನಿಮ್ಮ ಸರ್ಕಾರಕ್ಕೆ ನಾವೇ ತೆರಿಗೆ ಕಟ್ಟುತ್ತೇವೆ. ಇದುವರೆಗೂ ರೈತರ ಜತೆ ಯಾವ ಸರ್ಕಾರವೂ ಈ ರೀತಿ ವರ್ತನೆ ತೋರಿರಲಿಲ್ಲ. ಇದೇ ಮೊದಲ ಬಾರಿಗೆ ರೈತರಿಗೆ ನೀಡುತ್ತಿದ್ದ ವಿದ್ಯುತ್ ಪ್ರಮಾಣ ಪಾತಾಳಕ್ಕೆ ಇಳಿಸಿರುವ ಕಾಂಗ್ರೆಸ್ ಸರ್ಕಾರ ರೈತರ ಜೀವನದಲ್ಲಿ ಚೆಲ್ಲಾಟವಾಡುತ್ತಿದೆ.